ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಉತ್ಸಾಹವನ್ನು ಕಾಂಗ್ರೆಸ್ ಅವರನ್ನು ಸಚಿವರಾಗಿ ಮಾಡಲು ತೋರಲಿಲ್ಲ. ಕಾಂಗ್ರೆಸ್ ಹೇಗೆ ಮೋಸ ಮಾಡುತ್ತದೆ ಎಂಬುದಕ್ಕೆ ಜಗದೀಶ್ ಶೆಟ್ಟರ್ ಅವರೇ ಸಾಕ್ಷಿ.
ಶೆಟ್ಟರ್ ಸಿಎಂ ಆಗಿ ರಾಜ್ಯದಲ್ಲಿ ಒಂದುಕಾಲು ವರ್ಷ ಸಮರ್ಥವಾಗಿ ಕೆಲಸ ಮಾಡಿದ್ದವರು, ವಿಪಕ್ಷ ನಾಯಕರಾಗಿದ್ದವರು. ಅವರಿಗೆ ಕಾಂಗ್ರೆಸ್ ಹೇಗೆ ಮೋಸ ಮಾಡುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ
ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ಹೇಳಿದ್ದಾರೆ.
ಕೇವಲ 10 ತಿಂಗಳವರೆಗಷ್ಟೇ ಕಾಂಗ್ರೆಸ್ನಲ್ಲಿದ್ದು, ಕಾಂಗ್ರೆಸ್ನಿಂದಲೇ 8 ತಿಂಗಳು ಎಂಎಲ್ಸಿ ಆಗಿ ಈಗ ಬಿಜೆಪಿಗೆ ವಾಪಸ್ಸಾಗಿರುವ ಶೆಟ್ಟರ್ ಅವರ ಬಗ್ಗೆ ದೇವೇಗೌಡರ ಕರುಣೆ ಮತ್ತು ಅನುಕಂಪ ಮತ್ತು ಆ ಅನುಕಂಪ ನೆಪದಲ್ಲಿ ಕಾಂಗ್ರೆಸ್ ಮೇಲೆ ನಂಬಿಕೆ ದ್ರೋಹದ ಆರೋಪ ಮಾಡಿದ್ದನ್ನು ನೋಡಿದರೆ ಅಚ್ಚರಿಯಾಗುತ್ತದೆ.
ಹಾಗೆ ನೋಡಿದರೆ ನಿಜಕ್ಕೂ ಮೋಸ ಆಗಿದ್ದು ಸಿ ಎಂ ಇಬ್ರಾಹಿಂ ಅವರಿಗೆ. ಮಾಜಿ ಪ್ರಧಾನಿಗಳು ಮತ್ತು ರಾಜಕೀಯ ಮುತ್ಸದಿಯಾಗಿರುವ ದೇವೇಗೌಡರ ನಿಜವಾದ ಅನುಕಂಪ ಇರಬೇಕಾಗಿದ್ದು ಸಿಎಂ ಇಬ್ರಾಹಿಂ ಅವರ ಬಗ್ಗೆಯೇ ಹೊರತು ಶೆಟ್ಟರ್ ಬಗ್ಗೆಯಲ್ಲ.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಗೂ ಒಂದು ವರ್ಷ ಮೊದಲೇ ಮಾರ್ಚ್ 2022ರಲ್ಲಿ ಸಿ ಎಂ ಇಬ್ರಾಹಿಂ ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಜೆಡಿಎಸ್ಗೆ ಸೇರಿದ್ದರು. ಜೆಡಿಎಸ್ಗೆ ರಾಜೀನಾಮೆ ನೀಡುವಾಗ ನಿಯಮಗಳ ಪ್ರಕಾರ ಇಬ್ರಾಹಿಂ ಅವರು ಎಂಎಲ್ಸಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.
ಕಾಂಗ್ರೆಸ್ನಲ್ಲೇ ಇರುತ್ತಿದ್ದರೆ ಇಬ್ರಾಹಿಂ ಅವರು ಇದೇ ವರ್ಷದ ಜೂನ್ವರೆಗೂ ಎಂಎಲ್ಸಿ ಆಗಿರುತ್ತಿದ್ದರು, ಈಗ ಕಾಂಗ್ರೆಸ್ಸೇ ಅಧಿಕಾರದಲ್ಲಿದ್ದ ಕಾರಣ ಸಚಿವರೂ ಆಗಿರುತ್ತಿದ್ದರು.
ವಿಧಾನಸಭಾ ಚುನಾವಣೆಗೂ ಒಂದು ವರ್ಷ ಮುಂಚೆ ಜೆಡಿಎಸ್ನ ರಾಜ್ಯಾಧ್ಯಕ್ಷರಾಗಿದ್ದು ಬಿಟ್ಟರೆ ಇಬ್ರಾಹಿಂ ಅವರಿಗೆ ಜೆಡಿಎಸ್ನಿಂದ ದಕ್ಕಿದ್ದು ಏನೂ ಇಲ್ಲ.
ಇಬ್ರಾಹಿಂ ಅವರು ಜೆಡಿಎಸ್ಗೆ ಬಂದ ನಂತರ 2022ರ ಜೂನ್ನಲ್ಲಿ ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆದ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಇಬ್ರಾಹಿಂ ಅವರು ಮುಸಲ್ಮಾನ ಸಮುದಾಯದ ತಮಗೆ ದೇವೇಗೌಡರು ಟಿಕೆಟ್ ಕೊಡುತ್ತಾರೆ, ಕಾಂಗ್ರೆಸ್ನಿಂದ ಎಂಎಲ್ಸಿ ಸ್ಥಾನ ಬಿಟ್ಟು ಬಂದಿದ್ದಕ್ಕೆ ಇಲ್ಲಿ ನಷ್ಟ ಪರಿಹಾರ ಆಗುತ್ತದೆ ಎಂದುಕೊಂಡಿದ್ದರು. ಆದರೆ ದೇವೇಗೌಡರು ತಮ್ಮನ್ನೇ ನಂಬಿ ಕಾಂಗ್ರೆಸ್ನಲ್ಲಿ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದ ಇಬ್ರಾಹಿಂಗೆ ಟಿಕೆಟ್ ಕೊಡಲಿಲ್ಲ.
ಅದೇ ವರ್ಷ ಅಂದರೆ 2022ರ ಜುಲೈನಲ್ಲಿ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾವಣೆ ನಡೆಯಿತು. ಆಗಲೂ ಸಿ ಎಂ ಇಬ್ರಾಹಿಂ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ದೇವೇಗೌಡರು ಮತ್ತು ಕುಮಾರಸ್ವಾಮಿ ಇವರಿಬ್ಬರು ಮನಸ್ಸು ಮಾಡಿದ್ದರೆ ಇಬ್ರಾಹಿಂ ಅವರನ್ನು ರಾಜ್ಯಸಭೆ ಸಂಸದರನ್ನಾಗಿ ಕಳಹಿಸಿಕೊಡಬಹುದಿತ್ತು. ಆದರೆ ಕುಮಾರಸ್ವಾಮಿ ಅವರ ಹಠದ ಕಾರಣ ಇಬ್ರಾಹಿಂ ಅವರಿಗೆ ಸಿಗಬಹುದಾಗಿದ್ದ ರಾಜ್ಯಸಭಾ ಸ್ಥಾನನೂ ದಕ್ಕಲಿಲ್ಲ.
ಹಾಗೆ ನೋಡಿದರೆ 2020ರ ಜೂನ್ನಲ್ಲಿ ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮತ್ತೆ ಸಂಸತ್ಗೆ ಪ್ರವೇಶ ಮಾಡಿದ್ದೇ ಕಾಂಗ್ರೆಸ್ನ ಬೆಂಬಲದಿಂದ. ಆ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಬಳಿಯಿದ್ದ ಹೆಚ್ಚುವರಿ ಮತಗಳನ್ನು ದೇವೇಗೌಡರ ಪರವಾಗಿ ಹಾಕಿತ್ತು.
ಜೂನ್ 8, 2020ರಲ್ಲಿ ರಾಜ್ಯಸಭಾ ಚುನಾವಣೆಗೆ ದೇವೇಗೌಡರು ಸ್ಪರ್ಧೆ ಮಾಡ್ತಾರೆ ಎಂದು ಟ್ವೀಟಿಸಿದ್ದ ಹೆಚ್ ಡಿ ಕುಮಾರಸ್ವಾಮಿ ಅವರು ಆಗ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ಸಲ್ಲಿಸಿದ್ದರು.
“Former PM @H_D_Devegowda has decided to contest the Rajya Sabha elections at the request of party legislators, @INCIndia Sonia Gandhi Ji and several national leaders” – ಜೂನ್ 8. 2020ರಂದು ಹೆಚ್ ಡಿ ಕುಮಾರಸ್ವಾಮಿ ಅವರು ಮಾಡಿದ್ದ ಟ್ವೀಟ್.
ಶೆಟ್ಟರ್ ಅವರ ವಿಚಾರದಲ್ಲಿ ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿಲ್ಲ. ವಿಧಾನಸಭಾ ಚುನಾವಣೆಗೂ ಕೇವಲ 23 ದಿನಗಳ ಮುಂಚೆ ಕಾಂಗ್ರೆಸ್ಗೆ ಸೇರಿದ್ದರು ಶೆಟ್ಟರ್. ಮೇ 13ರಂದು ಪ್ರಕಟವಾದ ವಿಧಾನಸಭಾ ಫಲಿತಾಂಶದಲ್ಲಿ ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಬಿ ಎಲ್ ಸಂತೋಷ್ ಬಣದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ವಿರುದ್ಧ 35 ಸಾವಿರಕ್ಕೂ ಅಧಿಕ ಮತಗಳಿಂದ ಹೀನಾಯವಾಗಿ ಸೋತ ಮಾಜಿ ಮುಖ್ಯಮಂತ್ರಿ ಶೆಟ್ಟರ್ ಅವರನ್ನು ಕೇವಲ 1 ತಿಂಗಳಲ್ಲೇ ವಿಧಾನಪರಿಷತ್ ಚುನಾವಣೆಗೆ ಆಯ್ಕೆ ಮಾಡಿತ್ತು. ಈ ಮೂಲಕ ಕಾಂಗ್ರೆಸ್ ಅಲೆ ಇದ್ದಾಗ್ಯೂ ಶಾಸಕರಾಗಿ ಸ್ವಂತ ಬಲದಲ್ಲೂ ಗೆಲ್ಲಕ್ಕಾದ ಶೆಟ್ಟರ್ ಮತ್ತೆ ಸೋತ ಒಂದೂವರೆ ತಿಂಗಳಲ್ಲೇ ಮತ್ತೆ ವಿಧಾನಸೌಧದ ಮೆಟ್ಟಿಲು ಹತ್ತಿದರು.
ಆದರೆ ಕಾಂಗ್ರೆಸ್ನಲ್ಲಿದ್ದ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ವಿಧಾನಸಭಾ ಚುನಾವಣೆಯಲ್ಲಿ 1 ವರ್ಷ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಗಾಗಿ ರಾಜ್ಯಾದ್ಯಂತ ಪಕ್ಷ ಸಂಘಟನೆಗಾಗಿ ಓಡಾಡಿದ ಇಬ್ರಾಹಿಂ ಅವರನ್ನು ದೇವೇಗೌಡರು ತಮ್ಮ ಮಗ ಕುಮಾರಸ್ವಾಮಿ ಅವರ ಬಿಜೆಪಿ ಪ್ರೀತಿಯ ಕಾರಣದಿಂದ ಜೆಡಿಎಸ್ ಅಧ್ಯಕ್ಷ ಸ್ಥಾನದಿಂದಲೇ ತೆಗೆದುಹಾಕಿ ಆ ಬಳಿಕ ಪಕ್ಷದಿಂದಲೇ ಉಚ್ಛಾಟನೆ ಮಾಡಿದರು.
ಹಾಗಾದ್ರೆ ಮೋಸ ಆಗಿದ್ದು ಯಾರಿಗೆ..? ಮೋಸ ಮಾಡಿದ್ದು ಯಾರು..? ಇಬ್ರಾಹಿಂಗೋ, ಶೆಟ್ಟರ್ಗೋ..? ಕಾಂಗ್ರೆಸ್ಸೋ ಅಥವಾ ದೇವೇಗೌಡರ ಪಕ್ಷವೋ..?