ಅಯೋಧ್ಯೆಗೆ ಹೋಗುತ್ತಿದ್ದ ಕರ್ನಾಟಕದ ವ್ಯಾನ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಏಳು ಮಂದಿ ಮೃತಪಟ್ಟು, ಇತರ 9 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್-ಲಖಿಂಪುರ ಹೆದ್ದಾರಿಯಲ್ಲಿ ಭಾನುವಾರ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕದಿಂದ ಅಯೋಧ್ಯೆಗೆ ಹೋಗುತ್ತಿದ್ದ ವ್ಯಾನ್ ನಲ್ಲಿ 16 ಮಂದಿ ಪ್ರಯಾಣಿಕರಿದ್ದರು. ಮೋತಿಪುರದ ನಾನಿಹ ಮಾರುಕಟ್ಟೆಯಲ್ಲಿ ಎದುರಿಗೆ ಬಂದ ಟ್ರಕ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ತಿಳಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಘಟನೆಯಲ್ಲಿ ವ್ಯಾನ್ ಚಾಲಕ ಸೇರಿದಂತೆ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತರ ಇಬ್ಬರು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ. ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಭೂಮಿಕಾ (16) ಅವರನ್ನು ವಿಡಿಯೋ ಕಾಲ್ ಮತ್ತು ಫೋಟೋ ಗಳೊಂದಿಗೆ ಕುಟುಂಬಸ್ಥರೊಂದಿಗೆ ಸಂಪರ್ಕಿಸಿ ಮೃತರನ್ನು ಗುರುತಿಸಲಾಗಿದೆ. ಮೃತರನ್ನು ಶಿವಕುಮಾರ್ ಪೂಜಾರಿ (28) ಜಗದಾಂಬ (52) ಮನ್ ಮತ್ (36) ಅನಿಲ್ (30) ಸಂತೋಷ್ (35) ಶಶಿಕಲಾ (38) ಮತ್ತು ಸರಸ್ವತಿ (47) ಎಂದು ಗುರುತಿಸಲಾಗಿದೆ.ಇವರೆಲ್ಲರೂ ಬೀದರ್ ಜಿಲ್ಲೆಯ ಗಾಂದಿ ಗಂಜ್ ನವರು ಎಂದು ಪೊಲೀಸರು ಹೇಳಿದ್ದಾರೆ.
ಟ್ರಕ್ ಚಾಲಕ್ ಘಟನೆ ನಂತರ ತಲೆಮರೆಸಿಕೊಂಡಿದ್ದು, ಈ ಅಪಘಾತದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಎಎಸ್ ಪಿ ತಿಳಿಸಿದ್ದಾರೆ.
ರಾಜ್ಯದ ಸಿಎಂ ಬೊಮ್ಮಾಯಿಯವರು ಟ್ವೀಟ್ ಮಾಡಿ ಮೃತಪಟ್ಟವರಿಗೆ ಸಂತಾಪ ಸೂಚಿಷಿರುವ ಅವರು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಲ್ಲಿನ ಸಿಎಂ ಯೋಗಿ ಅವರಲ್ಲಿ ಕೇಳಿಕೊಂಡಿದ್ದೇವೆ. ಮೃತ ದೇಹಗಳನ್ನು ಶೇಘ್ರವೇ ರಾಜ್ಯಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.
ನಾನು ಈ ಕುರಿತು ಈಗಾಗಲೇ ಉತ್ತರಪ್ರದೇಶದ ಮುಖ್ಯಮಂತ್ರಿ ಶ್ರೀ @myogiadityanath ಹಾಗೂ ಸ್ಥಳೀಯ ಜಿಲ್ಲಾಧಿಕಾರಿಯೊಂದಿಗೆ ಮಾತಮಾಡಿದ್ದೇನೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ನಾವು ಅಲ್ಲಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಮೃತದೇಹಗಳನ್ನು ರಾಜ್ಯಕ್ಕೆ ತರಲು ಎಲ್ಲಾ ಸೂಕ್ತವ್ಯವಸ್ಥೆ ಮಾಡಲಾಗಿದೆ.
— Basavaraj S Bommai (Modi Ka Parivar) (@BSBommai) May 29, 2022