ಕಾಶಿ ಯಾತ್ರೆಗೆ ಹೋಗುವ ಪ್ರತಿಯೊಬ್ಬರಿಗೂ 5 ಸಾವಿರ ರೂಪಾಯಿ ನೀಡುವ ಸಂಬಂಧ ರಾಜ್ಯ ಸರ್ಕಾರ ಅರ್ಜಿ ಅಹ್ವಾನಿಸಿದೆ.
ತಲಾ 5 ಸಾವಿರ ರೂಪಾಯಿಯಂತೆ 30 ಸಾವಿರ ಮಂದಿ ಯಾತ್ರಿಗಳಿಗೆ ಸರ್ಕಾರ ಸಹಾಯಧನ ನೀಡಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಜೆಟ್ನಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದರು.
ಈ ಯೋಜನೆಯ ಜಾರಿಗೆ ಸರ್ಕಾರ 7 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ಕಾಶಿ ಯಾತ್ರೆಗೆ ಸಹಾಯಧನ ಪಡೆಯಲು ಇಚ್ಛಿಸುವವರು ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು 18 ವರ್ಷ ಮೇಲ್ಪಟ್ಟವರಾಗಿರಬೇಕು.
ಅರ್ಜಿ ಸಲ್ಲಿಕೆ ವೇಳೆ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿಯ ಪ್ರತಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಏಪ್ರಿಲ್ 1, 2022ರಿಂದ ಜೂನ್ 30, 2022ರ ನಡುವೆ ಕಾಶಿಗೆ ಹೋದವರು ತಮ್ಮ ಪ್ರಯಾಣದ ಬಗೆಗಿನ ದಾಖಲಾತಿಗಳನ್ನು ಮುಜರಾಯಿ ಇಲಾಖೆ ಆಯುಕ್ತರಿಗೆ ಸಲ್ಲಿಸಬೇಕು.
ಜುಲೈ 1ರಿಂದ ಕಾಶಿಗೆ ಹೋಗುವವರು ತಮ್ಮ ದಾಖಲೆಗಳ ಜೊತೆಗೆ ವಾರಾಣಾಸಿಯಲ್ಲಿರುವ ಕರ್ನಾಟಕ ರಾಜ್ಯ ಛತ್ರದ ವ್ಯವಸ್ಥಾಪಕರಿಂದ ಪ್ರಮಾಣಪತ್ರ ಪಡೆದು ಸಲ್ಲಿಸಬೇಕು.
ಆನ್ಲೈನ್ ಅಥವಾ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ.