ಇಂದು ಸಂಜೆ 6.40 ಕ್ಕೆ ಯಶ್ ನಟನೆಯ ಕೆಜಿಎಫ್ 2 ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ. ಐದು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಹಾಗಾಗಿ ಐದು ಭಾಷೆಯಲ್ಲೂ ಏಕಕಾಲಕ್ಕೆ ಟ್ರೈಲರ್ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್.
ಕನ್ನಡದ ಟ್ರೈಲರ್ನ್ನು ಶಿವರಾಜ್ಕುಮಾರ್ ಬಿಡುಗಡೆ ಮಾಡಲಿದ್ದಾರೆ. ತೆಲುಗಿನ ಖ್ಯಾತ ನಟ ರಾಮ್ ಚರಣ್ ಕೆಜಿಎಫ್ 2 ತೆಲುಗು ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದರೆ, ತಮಿಳಿನ ಖ್ಯಾತ ನಟ ಸೂರ್ಯ ಹಾಗೂ ಮಲಯಾಳಂನಲ್ಲಿ ನಟ ಪೃಥ್ವಿಯವರು ಕೆಜಿಎಫ್ 2 ತಮಿಳು ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ. ಈ ಟ್ರೈಲರ್ ರಿಲೀಸ್ ಅನ್ನು ವಿಶೇಷ ರೀತಿಯಲ್ಲಿ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದು, ಯಶ್ ಅಭಿಮಾನಿಗಳು ರಾಜ್ಯದ ನಾನಾ ಕಡೆ ಹಬ್ಬದಂತೆ ಆಚರಿಸುತ್ತಿದ್ದಾರೆ. ವಿಶ್ವದ ಸುಮಾರು 7 ಸಾವಿರ ಸ್ಕ್ರೀನ್ಗಳಲ್ಲಿ ಏಪ್ರೀಲ್ 14 ರಂದು ಚಿತ್ರ ಬಿಡುಗಡೆಯಾಗಲಿದೆ.
ಇಂದು ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಟ್ರೇಲರ್ ಬಿಡುಗಡೆ ಆಗಲಿದೆ. ಭಾರತೀಯ ಭಾಷೆಯ 180 ಕ್ಕೂ ಹೆಚ್ಚು ಬೇರೆ ಭಾಷೆಯ ಪತ್ರಕರ್ತರು ಟ್ರೇಲರ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಸಂಜೆ 6.45ಕ್ಕೆ ಟ್ರೇಲರ್ ಬಿಡುಗಡೆ ಆಗಲಿದ್ದು, ಚಿತ್ರತಂಡದ ಪ್ರಮುಖ ಕಲಾವಿದರು, ತಂತ್ರಜ್ಞರು ಮತ್ತು ಕನ್ನಡದ ಹೆಸರಾಂತ ನಟರು ಹಾಗೂ ಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.
ಕೆಜಿಎಫ್-2 ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಮತ್ತು ಶಿವರಾಜ್ ಕುಮಾರ್ ಆಗಮಿಸುತ್ತಿದ್ದು, ಸಿನಿಮಾದ ಕಲಾವಿದರಾದ ಬಾಲಿವುಡ್ ನಟ ಸಂಜಯ್ ದತ್, ಮಲಯಾಳಂ ಹೆಸರಾಂತ ನಟ ಪೃಥ್ವಿರಾಜ್, ಬಾಲಿವುಡ್ ನಟಿ ರವೀನಾ ಟಂಡನ್, ನಟ ಯಶ್, ನಟಿ ಶ್ರೀನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು, ನಿರ್ಮಾಪಕ ವಿಜಯ ಕಿರಗಂದೂರು ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ವೇದಿಕೆಯ ಮೇಲೆ ಇರಲಿದ್ದಾರೆ.