ಬೊಮ್ಮಾಯಿ ಮಾಮ ಸಂಕಷ್ಟದ ದಿನಗಳಲ್ಲಿ ತಮ್ಮ ಬೆಂಬಲಕ್ಕೆ ನಿಂತಿದ್ದರು ಎಂಬ ಕಕ್ಕುಲತೆಯ ಕಾರಣಕ್ಕೆ ಮಾತ್ರ ನಟ ಕಿಚ್ಚ ಸುದೀಪ್, ಅವರು ಹೇಳಿದ ಕಡೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರಾ..? ಈ ಪ್ರಶ್ನೆಗೆ ಹೌದು ಎನ್ನುವುದು ತೀರಾನೆ ಕಷ್ಟ.
ಬರೀ ಬೊಮ್ಮಾಯಿ ಮಾಮ ಎಂಬ ಕಾರಣಕ್ಕೆ ಸ್ಟಾರ್ ಹೀರೋ ಸುದೀಪ್ ಬಿಜೆಪಿ ಪರ ಕ್ಯಾಂಪೇನ್ ಮಾಡುತ್ತಿಲ್ಲ ಎಂಬುದು ಅವರು ಪ್ರಚಾರದ ಅಖಾಡಕ್ಕೆ ಧುಮುಕಿದ ಮೊದಲ ದಿನ ಜಗಜ್ಜಾಹೀರಾಗಿದೆ. ಇದರ ಹಿಂದೆ ದೊಡ್ಡ ಮಟ್ಟದ ಲೆಕ್ಕಾಚಾರಗಳು ಇವೆ ಎನ್ನುವುದು ಬಟಾಬಯಲಾಗಿದೆ.
ಬುಧವಾರ ಮೊಳಕಾಲ್ಮೂರು, ಜಗಳೂರು, ಮಾಯಕೊಂಡ, ದಾವಣಗೆರೆ ಉತ್ತರ, ದಕ್ಷಿಣ ಮತ್ತು ಸಂಡೂರು ಕ್ಷೇತ್ರಗಳಲ್ಲಿ ಬಿರುಬಿಸಿಲನ್ನು ಲೆಕ್ಕಿಸದೇ ಕಿಚ್ಚ ಸುದೀಪ್ ಭರ್ಜರಿ ಪ್ರಚಾರ ನಡೆಸಿದ್ದರು. ಇವರು ಒಳ್ಳೆಯರು ಎಂಬ ಕಾರಣಕ್ಕೆ ಈ ಅಭ್ಯರ್ಥಿಗಳ ಪ್ರಚಾರಕ್ಕೆ ಬಂದಿದ್ದೇನೆ. ಈಗ ಗೆಲ್ಲಿಸಿ.. ಮುಂದಿನ ದಿನಗಳಲ್ಲಿ ನಾನು ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆ ಎಂದಿದ್ದರು. ಕಿಚ್ಚ ಸುದೀಪ್ ಅವರ ಈ ಮಾತಿಗೆ ಜನ ಚಪ್ಪಾಳೆ ತಟ್ಟಿ ಅಭಿಮಾನ ಮೆರೆದಿದ್ದರು.
ಇಂಟ್ರೆಸ್ಟಿಂಗ್ ವಿಚಾರ ಎಂದರೇ, ಜಗಳೂರಿನ ರೋಡ್ ಶೋ ವೇಳೆ ಕಿಚ್ಚ ಸುದೀಪ್ ಪಕ್ಕದಲ್ಲೇ ನಿಂತಿದ್ದ ವ್ಯಕ್ತಿಯೊಬ್ಬರು ಮೈಕ್ ಹಿಡಿದು, ಬಿಜೆಪಿಗೆ ಮತ ಹಾಕಿ ಗೆಲ್ಲಿಸಿ.. ಕಿಚ್ಚ ಸುದೀಪ್ ಉಪ ಮುಖ್ಯಮಂತ್ರಿ ಆಗುತ್ತಾರೆ ಎಂಬ ಘೋಷಣೆಯನ್ನು ಪದೇ ಪದೇ ಮೊಳಗಿಸುತ್ತಲೇ ಇದ್ದರು. ಒಂದೊಮ್ಮೆ ಅಂತಹ ಅಭಿಲಾಷೆ ಇಲ್ಲದಿದ್ದಲ್ಲಿ ನೇರ ಸ್ವಭಾವದ ಕಿಚ್ಚ ಸುದೀಪ್, ಹಾಗೆಲ್ಲ ಇಲ್ಲದಿರುವುದನ್ನು ಹೇಳಬೇಡಿ.. ಗೊಂದಲ ಮೂಡಿಸುವುದು ಬೇಡ ಎಂಬ ಸ್ಪಷ್ಟೀಕರಣವನ್ನು ನೀಡುತ್ತಿದ್ದರು. ಆದರೆ, ಕಿಚ್ಚ ಸುದೀಪ್ ಡಿಸಿಎಂ ಆಗುತ್ತಾರೆ ಎಂಬ ಘೋಷಣೆ ವೇಳೆ ಸುದೀಪ್ ಆ ಡೈಲಾಗ್ ಗಳನ್ನು ಎಂಜಾಯ್ ಮಾಡುತ್ತಿರುವಂತೆ ಕಂಡಿತು..
ಇದೆಲ್ಲವನ್ನು ಗಮನಿಸಿದಲ್ಲಿ, ಕಿಚ್ಚ ಸುದೀಪ್ ಗೆ ಬಿಜೆಪಿ ನಾಯಕರು ಡಿಸಿಎಂ ಭರವಸೆಯನ್ನು ನೀಡಿದ್ದರೂ ಅಚ್ಚರಿ ಇಲ್ಲ ಎಂಬ ಮಾತುಗಳು ರಾಜಕೀಯ ಪಡಸಾಲೆಯಿಂದಲೇ ಕೇಳಿಬರುತ್ತಿವೆ. ಆದರೆ, ಈ ಬಗ್ಗೆ ಬಿಜೆಪಿಯ ಯಾವೊಬ್ಬ ನಾಯಕರು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಕಿಚ್ಚ ಕೂಡ ತುಟಿ ಬಿಚ್ಚಿಲ್ಲ.
ಅಂದು ರಾಮುಲು.. ಇಂದು ಕಿಚ್ಚ ಸುದೀಪ್..!
ಅದು 2018ರ ಚುನಾವಣೆ ಸಂದರ್ಭ.. ಎಸ್ಟಿ ಸಮುದಾಯದ ವೋಟ್ ಬ್ಯಾಂಕ್ ಸೆಳೆಯಲು ಬಿಜೆಪಿ ಹೈಕಮಾಂಡ್ ರಾಮುಲು ಎಂಬ ಅಸ್ತ್ರವನ್ನು ಪ್ರಯೋಗಿಸಿತ್ತು. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಶ್ರೀರಾಮುಲು ಡಿಸಿಎಂ ಆಗುವುದು ಶತಸಿದ್ದ ಎಂದು ಖುದ್ದು ಅಮಿತ್ ಶಾ ಹಲವು ಬಾರಿ ಬಹಿರಂಗ ವೇದಿಕೆಗಳಲ್ಲಿಯೇ ಹೇಳಿಕೆ ಕೊಟ್ಟಿದ್ದರು.
ನಾಯಕ ಸಮುದಾಯದ ಮತದಾರರು ತಮ್ಮ ಕುಲಸ್ಥರೊಬ್ಬರು ಡಿಸಿಎಂ ಆಗುತ್ತಾರಲ್ಲ ಎಂದು ಸಂಭ್ರಮಿಸಿ ಬಿಜೆಪಿ ಕಡೆಗೆ ಹೆಚ್ಚು ಒಲವು ತೋರಿದ್ದರು. ಆದರೆ, ಬದಲಾದ ಕಾಲ ಘಟ್ಟದಲ್ಲಿ ರಾಮುಲು ಅವರನ್ನು ಡಿಸಿಎಂ ಮಾಡಲಿಲ್ಲ ಬಿಜೆಪಿ ಹೈಕಮಾಂಡ್.. ಬದಲಾಗಿ ಕೈಯಲ್ಲಿದ್ದ ಪ್ರಭಾವಿ ಖಾತೆಯನ್ನು ಕಿತ್ತುಕೊಂಡು ರಾಮುಲುರನ್ನು ಅವಗಣನೆ ಮಾಡಿತು. ಇದು ಈಗಲೂ ಮುಂದುವರೆದಿದೆ.
2018ರಲ್ಲಿ ಸ್ಟಾರ್ ಕ್ಯಾಂಪೇನರ್ ಆಗಿದ್ದ ರಾಮುಲು ಈಗಲೂ ಕೂಡ ಸ್ಟಾರ್ ಪ್ರಚಾರಕ.. ಆದರೆ, ಹೆಚ್ಚು ಕಡಿಮೆ ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಕಿಚ್ಚ ಸುದೀಪ್ ದಿನಕ್ಕೆ ಕನಿಷ್ಟ ಐದು ಕ್ಷೇತ್ರಗಳು ಎಂಬಂತೆ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದಾರೆ.ಬಿಜೆಪಿಗೆ ಮತಗಳ ಫಸಲು ತಂದುಕೊಡಲು ಪ್ರಯತ್ನ ನಡೆಸಿದ್ದಾರೆ.
ಒಂದೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಕಿಚ್ಚ ಸುದೀಪ್ ರನ್ನು ನಿಜವಾಗಿಯೂ ಉಪ ಮುಖ್ಯಮಂತ್ರಿ ಮಾಡುತ್ತದೆಯೋ? ಅಥವಾ, ಈ ಹಿಂದೆ ರಾಮುಲು ಕಿವಿ ಮೇಲೆ ಹೂವಾ ಇಟ್ಟಂತೆ ಮುಂದೆ ಕಿಚ್ಚ ಸುದೀಪ್ ಕಿವಿ ಮೇಲೆಯೂ ಬಿಜೆಪಿ ಹೈಕಮಾಂಡ ಕಮಲದ ಹೂವ ಇಡುತ್ತದೆಯೇ ಎಂಬುದು ಇಲ್ಲಿ ಯಕ್ಷ ಪ್ರಶ್ನೆ.