ಕಿಚ್ಚ ಸುದೀಪ್ ಕೊರೋನಾ ಸೋಂಕು ತಗುಲಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿತ್ತು. ಆ ಬೆನ್ನಲ್ಲೇ, ಕಿಚ್ಚನ ಫ್ಯಾನ್ಸ್ ಶೀಘ್ರ ಚೇತರಿಕೆಗೆ ಹಾರೈಸಿದ್ದರು. ಇದೀಗ, ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿರ್ಮಾಪಕ ಜಾಕ್ ಮಂಜು ಅವರು ಸುದೀಪ್ಗೆ ಕೊರೋನಾ ಸೋಂಕು ದೃಢವಾಗಿಲ್ಲ. ಆದರೆ ಜ್ವರ ಇದೆ ಎಂದು ಹೇಳಿದ್ದಾರೆ.
ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿರುವ ಜಾಕ್ ಮಂಜು, ಸುದೀಪ್ ಅವರು ಜ್ವರದಿಂದ ಬಳಲುತ್ತಿರುವುದು ನಿಜ. ಆದರೆ, ಕೊರೋನಾ ಪಾಸಿಟಿವ್ ಆಗಿಲ್ಲ. ಹಾಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ನಿಗದಿತ ದಿನಾಂಕಗಳಂದು ಅವರು ಮತ್ತೆ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಜುಲೈ 23 ರಿಂದ ಅವರು ಅನೇಕ ಊರುಗಳಿಗೆ ಪ್ರಚಾರಕ್ಕಾಗಿ ತೆರಳಲಿದ್ದಾರೆ ಎಂದು ಮಂಜು ವಿಡಿಯೋದಲ್ಲಿ ಹೇಳಿದ್ದಾರೆ.
ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಸಿನೆಮಾ ವಿಕ್ರಾಂತ್ ರೋಣ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಹೀಗಾಗಿ ಬಿಡುವಿಲ್ಲದ ಪ್ರಚಾರದ ಕೆಲಸಗಳಲ್ಲಿ ಕಿಚ್ಚ ತೊಡಗಿಕೊಂಡಿದ್ದಾರೆ. ಇನ್ನೇನು ಮುಂದಿನ ವಾರ ಸಿನಿಮಾ ರಿಲೀಸ್ ಆಗಲಿದೆ. ಅಷ್ಟರಲ್ಲಿ ಕೊರೋನಾ ಸೋಂಕು ಎಂದು ಸುದ್ದಿಯಾಗಿ ಅಭಿಮಾನಿಗಳು ಆತಂಕ್ಕೀಡಾಗಿದ್ದರು.