ಉತ್ತರಾಖಂಡ್ನ ಪೌರಿ ಜಿಲ್ಲೆಯ ಯಮಕೇಶ್ವರ ಬ್ಲಾಕ್ನಲ್ಲಿರುವ ರೆಸಾರ್ಟ್ನಲ್ಲಿ ಸ್ವಾಗತಕಾರಿಣಿ(ರಿಸೆಪ್ಷನಿಸ್ಟ್)ಯಾಗಿ ಕೆಲಸ ಮಾಡುತ್ತಿದ್ದ 19 ವರ್ಷದ ಹುಡುಗಿಯ ಹತ್ಯೆ ಆರೋಪದ ಮೇಲೆ ಬಿಜೆಪಿಯ ಮಾಜಿ ಮಂತ್ರಿಯ ಪುತ್ರನನ್ನು ಬಂಧಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಅಂಕಿತ ಭಂಡಾರಿ ಎಂಬ ಯುವತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ರೆಸಾರ್ಟ್ನಲ್ಲಿರುವ ಇಬ್ಬರು ಉದ್ಯೋಗಿಗಳನ್ನು ಸಹ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಹರಿದ್ವಾರದ ಬಿಜೆಪಿ ನಾಯಕ ವಿನೋದ ಆರ್ಯ (Vinod Arya) ಅವರ ಪುತ್ರ ಪುಲ್ಕಿತ್ ಆರ್ಯ (Pulkit Arya) ಎಂದು ಗುರುತಿಸಲಾಗಿದೆ. ವಿನೋದ ಆರ್ಯ ಉತ್ತರಾಖಂಡದ ಮತಿ ಕಲಾ ಮಂಡಳಿಯ ಮಾಜಿ ಅಧ್ಯಕ್ಷರೂ ಆಗಿದ್ದಾರೆ. ಅವರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಗಿದೆ. ಆದರೆ, ಪ್ರಸ್ತುತ ಉತ್ತರಾಖಂಡ ಸರ್ಕಾರದಲ್ಲಿ ಯಾವುದೇ ಹುದ್ದೆ ನೀಡಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ : Burba Mohan Tripura : ಬಿಜೆಪಿಗೆ ತ್ರಿಪುರಾ ಶಾಸಕ ಗುಡ್ಬೈ – ಪ್ರಾದೇಶಿಕ ಪಕ್ಷದತ್ತ ಒಲವು
ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಹೊರತುಪಡಿಸಿ, ಇತರ ಇಬ್ಬರು – ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ಮ್ಯಾನೇಜರ್ ಅಂಕಿತ್ ಗುಪ್ತಾ – ಕಾಣೆಯಾದ ಹುಡುಗಿಯನ್ನು ಕೊಂದು ಆಕೆಯ ದೇಹವನ್ನು ಚೀಲಾ ಕಾಲುವೆಗೆ ಎಸೆದಿರುವುದಾಗಿ ಒಪ್ಪಿಕೊಂಡ ನಂತರ ಅವರನ್ನು ಬಂಧಿಸಲಾಗಿದೆ ಎಂದು ಪೌರಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಚಂದ್ರ ಸುಯಲ್ ತಿಳಿಸಿದ್ದಾರೆ.
ಆರೋಪಿಯು ಆರಂಭದಲ್ಲಿ ಪೊಲೀಸರನ್ನು ದಾರಿತಪ್ಪಿಸಲು ಯತ್ನಿಸಿದ್ದನಾದರೂ ಕಠಿಣ ವಿಚಾರಣೆಯ ನಂತರ ತಪ್ಪೊಪ್ಪಿಕೊಂಡಿದ್ದಾನೆ. ಯುವತಿಯ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಕಂದಾಯ ಪೊಲೀಸರಿಂದ ಸಾಮಾನ್ಯ ಪೊಲೀಸರಿಗೆ ವರ್ಗಾವಣೆಗೊಂಡ ನಂತರ 24 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಮೂವರನ್ನು ಕೋಟ್ದ್ವಾರ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಸೋಮವಾರ ಬೆಳಗ್ಗೆ ಆಕೆಯ ಕೊಠಡಿಯಲ್ಲಿ ಪತ್ತೆಯಾಗದ ಹಿನ್ನೆಲೆಯಲ್ಲಿ ಯುವತಿಯ ಪೋಷಕರು ಕಂದಾಯ ಪೊಲೀಸ್ ಹೊರಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಇದನ್ನೂ ಓದಿ : ಬಿಜೆಪಿ ಭ್ರಷ್ಟಾಚಾರ: PAYCM ಪೋಸ್ಟರ್ ಸಂಬಂಧ ಮೂವರ ಬಂಧನ