ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಇಂದು ಮಂಗಳವಾರ ಬೆಳಿಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಈ ಭೂಕಂಪನದ ಕೇಂದ್ರಬಿಂದು ಕೊಡಗಿನಲ್ಲಿರುವುದಾಗಿ ತಿಳಿದುಬಂದಿದೆ.
ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದಿಂದ 5.2 ಕಿ.ಮೀ ವಾಯುವ್ಯ ದಿಕ್ಕಿನಲ್ಲಿ ಭೂಮಿಯ 15 ಕಿ.ಮೀ. ಆಳದಲ್ಲಿ ರಿಕ್ಟರ್ ಮಾಪಕ 3.0ರಷ್ಟು ಭೂಕಂಪನವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಈ ಭೂಕಂಪನದಲ್ಲಿ ಯಾರಿಗೂ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಆದರೆ, ಹಲವು ಸೆಕೆಂಡ್ ಗಳಷ್ಟು ಸಮಯ ಕಂಪನದ ಅನುಭವವಾಗಿದೆ. ಸುಮಾರು 50 ಕಿ.ಮೀ ಪ್ರದೇಶದವರೆಗೂ ಅನುಭವವಾಗುವ ಸಾಧ್ಯತೆ ಇದೆ. ಆದರೆ, ಈ ಕಂಪನದಿಂದ ಭಯಪಡುವ ಅಗತ್ಯವಿಲ್ಲ. ಹೆಚ್ಚೆಂದರೆ ಮನೆಯಲ್ಲಿರುವ ವಸ್ತುಗಳು ಅಲುಗಾಡಬಹುದು. ಜನತೆ ಗಾಬರಿ ಆಗುವ ಅವಶ್ಯಕತೆಯಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ಹೇಳಿದೆ.
ಕೊಡಗಿನ ಮಡಿಕೇರಿ, ನಾಪೋಕ್ಲು, ಕುಕ್ಕುಂದ, ಕಾಡು, ಬಲ್ಲಮಾವಟ್ಟಿ. ದಬ್ಬಡ್ಕ, ಪೆರಾಜೆ, ಕರಿಕೆ, ಭಾಗಮಂಡಲ ಸೇರಿದಂತೆ ವಿವಿಧ ಕಡೆ 7.45 ಕ್ಕೆ ಭೂಮಿ ಕಂಪಿಸಿದ ಅನುಭವ ಜನರಿಗೆ ಆಗಿದೆ. ಮನೆಯಲ್ಲಿದ್ದ ಪಾತ್ರೆಗಳು ಅಲುಗಾಡಿವೆ. ಹಾಗೆಯೇ ದಕ್ಷಿಣ ಕನ್ನಡದ ಸುಳ್ಯದಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ. ಸಿಸಿಟಿವಿಯ ದೃಶ್ಯಗಳಲ್ಲಿ ಭೂಮಿ ಕಂಪಿಸಿರುವ ದೃಶ್ಯ ದಾಖಲಾಗಿದೆ.