ಹಿರಿಯ ನೇತಾರ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಮುಖ್ಯಮಂತ್ರಿಯಾಗುವ ಅವಕಾಶಗಳೇ ಹೆಚ್ಚಿರುವಂತೆ ಕಾಣುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಗೌರವಯುತವಾಗಿ ಹೇಗೆ ನಡೆಸಿಕೊಳ್ಳಬೇಕು ಎಂಬ ಬಗ್ಗೆ ಸದ್ಯ ಹೈಕಮಾಂಡ್ ಮಟ್ಟದಲ್ಲಿ ಕಸರತ್ತುಗಳು ನಡೆಯುತ್ತಿವೆ ಎನ್ನುವುದು ಸಮಾಚಾರ.
ಡಿಕೆ ಶಿವಕುಮಾರ್ ಎಲ್ಲಾ ರೀತಿಯಲ್ಲಿಯೂ ಪಕ್ಷವನ್ನು ಮುನ್ನಡೆಸಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಮುಖ್ಯ ಭೂಮಿಕೆ ವಹಿಸಿದ ಹೊರತಾಗಿಯೂ ಅವರ ವಿರುದ್ಧ ಇರುವ ಇಡಿ, ಐಟಿ ಕೇಸ್ ಗಳು ಮುಖ್ಯಮಂತ್ರಿ ಗಾದಿಗೆ ಅಡ್ಡಗಾಲಾಗಿ ಪರಿಣಮಿಸಬಹುದು ಎಂದು ಹೇಳಲಾಗುತ್ತಿದೆ.
ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿದಲ್ಲಿ ಬಿಜೆಪಿ ಯಾವುದಾದರೊಂದು ರೀತಿಯಲ್ಲಿ ಕಾಂಗ್ರೆಸ್ಗೆ ಇಕ್ಕಟ್ಟಿನ ಪರಿಸ್ಥಿತಿಗಳನ್ನು ಸೃಷ್ಟಿಸಬಹುದು.. ಇದು ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಮಸ್ಯಾತ್ಮಕವಾಗಿ ಪರಿಣಮಿಸಬಹುದು ಎಂಬ ಉದ್ದೇಶದಿಂದಲೇ ಮಾಸ್ ಲೀಡರ್, ಕ್ಲೀನ್ ಹ್ಯಾಂಡ್ ಮತ್ತು ಉತ್ತಮ ಆಡಳಿತ ನೀಡಿರುವ ಅನುಭವಿ ರಾಜಕಾರಣಿ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಮಾಡಲು ಹೈಕಮಾಂಡ್ ಒಲವು ತೋರುತ್ತಿದೆ.
ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಡಿಕೆ ಶಿವಕುಮಾರ್ ಅವರಿಗೆ ಪ್ರಮುಖ ಮತ್ತು ಪ್ರಭಾವಿ ಖಾತೆಗಳನ್ನು ನೀಡುವುದರ ಜೊತೆಗೆ ಉಪಮುಖ್ಯಮಂತ್ರಿ ಮಾಡುವ ಉದ್ದೇಶವನ್ನು ಹೈಕಮಾಂಡ್ ಹೊಂದಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅಹಿಂದ ಸಮುದಾಯ ದೊಡ್ಡ ಮಟ್ಟದಲ್ಲಿ ಕಾಣಿಕೆ ನೀಡಿರುವ ಹಿನ್ನೆಲೆಯಲ್ಲಿ ಆ ವರ್ಗದ ನಾಯಕರನ್ನು ಡಿಸಿಎಂ ಮಾಡಬೇಕು ಎಂಬ ಕೂಗು ಎದ್ದಿದೆ. ಆದರೆ, ಒಂದಕ್ಕಿಂತ ಹೆಚ್ಚು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿದಲ್ಲಿ, ಅದಕ್ಕಿರುವ ಪ್ರಾಮುಖ್ಯತೆ ಕಡಿಮೆ ಆಗಲಿದೆ ಎಂಬ ಕಾರಣಕ್ಕಾಗಿ, ಒಂದಕ್ಕಿಂತ ಹೆಚ್ಚು ಡಿಸಿಎಂ ಹುದ್ದೆ ಸೃಷ್ಟಿಸುವ ಪ್ರಸ್ತಾಪವನ್ನು ಡಿಕೆ ಶಿವಕುಮಾರ್ ತಿರಸ್ಕರಿಸುವ ಸಾಧ್ಯತೆಗಳು ಹೆಚ್ಚಿವೆ.
ಡಿಕೆ ಶಿವಕುಮಾರ್ ಒಂದೇ ಡಿಸಿಎಂ ಹುದ್ದೆಗೆ ಪಟ್ಟು ಹಿಡಿದಲ್ಲಿ ಉಳಿದ ಸಮುದಾಯಗಳನ್ನು ಹೇಗೆ ಓಲೈಸಬೇಕು ಎಂಬ ಬಗ್ಗೆಯೂ ಕಾಂಗ್ರೆಸ್ ಹೈಕಮಾಂಡ್ ಮಂಥನಗಳನ್ನು ನಡೆಸಿದೆ.
ಮುಖ್ಯಮಂತ್ರಿ ಆಯ್ಕೆಯನ್ನು ಎಐಸಿಸಿ ಅಧ್ಯಕ್ಷರ ವಿವೇಚನೆಗೆ ಬಿಡುವ ಒಂದು ಸಾಲಿನ ನಿರ್ಣಯವನ್ನು ಸಿಎಲ್ಪಿ ಸಭೆ ತೆಗೆದುಕೊಂಡಿದ್ದರೂ, ಮಲ್ಲಿಕಾರ್ಜುನ ಖರ್ಗೆಯವರು ಮಾತ್ರ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನು ಸಂಪರ್ಕಿಸಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ
2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂದರೇ ಸಿದ್ದರಾಮಯ್ಯ ಜೊತೆಗೆ ಡಿಕೆ ಶಿವಕುಮಾರ್ ಅವರಸೇವೆ ಅತ್ಯಗತ್ಯ ಎಂದು ಭಾವಿಸಿದೆ. ಹೀಗಾಗಿಯೇ, ಡಿಕೆ ಶಿವಕುಮಾರ್ ಅವರನ್ನು ರಾಷ್ಟ್ರೀಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವ ಯಾವುದೇ ಉದ್ದೇಶವನ್ನು ಕಾಂಗ್ರೆಸ್ ಹೈಕಮಾಂಡ್ ಹೊಂದಿಲ್ಲ.. ಹೀಗಾಗಿಯೇ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್, ಇಬ್ಬರನ್ನು ಒಪ್ಪಿಸಿಯೇ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಮುಂದಕ್ಕೆ ಸಾಗಲು ಹೈಕಮಾಂಡ್ ಮುಂದಾಗಿದೆ.
ಇಂದು ಡಿಕೆ ಶಿವಕುಮಾರ್ ದೆಹಲಿಗೆ ತೆರಳಲಿದ್ದು, ಅವರಿಗೆ ಸಂಭಾವ್ಯ ಸಾಧಕ-ಬಾಧಕಗಳನ್ನು ವಿವರಿಸಿ, ಒಪ್ಪಿಸಿ, ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ