ರೋಹಿತ್ ಚಕ್ರತೀರ್ಥ ಬರೆದ ಲೇಖನವನ್ನು ಪಠ್ಯಪುಸ್ತಕ ಸಮಿತಿಯಲ್ಲಿ ಚರ್ಚೆ ನಡೆಸದೆ ಕುವೆಂಪು ವಿಶ್ವವಿದ್ಯಾಲಯದ (Kuvempu University) ಬಿಸಿಎ ಪದವಿ ಪಠ್ಯದಲ್ಲಿ ಸೇರ್ಪಡೆ ಮಾಡಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮದಂತೆ ಕುವೆಂಪು ವಿಶ್ವವಿದ್ಯಾಲಯದ (Kuvempu University) ಪದವಿ ಪಠ್ಯಗಳನ್ನು ಪರಿಷ್ಕರಿಸಲಾಗುತ್ತಿದೆ. ಈ ಪರಿಷ್ಕರಣೆಯಲ್ಲಿ ಲೇಖಕ ರೋಹಿತ್ ಚಕ್ರತೀರ್ಥ ಅವರ ಲೇಖನವೊಂದನ್ನು ಸಮಿತಿಯಲ್ಲಿ ಚರ್ಚೆ ಮಾಡದೇ ಮತ್ತು ಅವರ ಪೂರ್ಣ ಹೆಸರನ್ನು ಮೆರಮಾಚಿ ಮೋಸ ಮಾಡಲಾಗಿದೆ ಎಂದು ಸಮಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಸಿಎ ಪದವಿಯ ಕನ್ನಡ ಭಾಷಾ ವಿಷಯದ ಪಠ್ಯದ ತಂತ್ರಜ್ಞಾನ ವಿಭಾಗದಲ್ಲಿನ ‘ಕೃತಕ ಬುದ್ದಿವಂತಿಕೆ; ಭವಿಷ್ಯ ತಂತ್ರಜ್ಞಾನದ ಹೆಬ್ಬಾಗಿಲು’ ಲೇಖನದ ಲೇಖಕರ ಹೆಸರು ರೋಹಿತ್ ಬೆಂಗಳೂರು ಎಂದು ಇದೆ. ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದಾಗ ಸಭೆಯಲ್ಲಿ ಮಾತಿಗೆ ಮಾತು ಬೆಳೆದು, ಸದಸ್ಯರು ಪರಸ್ಪರ ಎಳೆದಾಡಿಕೊಂಡರು ಎಂದು ಪ್ರಜಾವಾಣಿ ವರದಿ ಮಾಡಿದೆ. ಇದನ್ನೂ ಓದಿ : ಪಠ್ಯದಲ್ಲಿ ಆದಿವಾಸಿ ಸಮುದಾಯದ ಅವಹೇಳನ – ರೋಹಿತ್ ಚಕ್ರತೀರ್ಥ ವಿರುದ್ಧ ದೂರು
ರೋಹತ್ ಚಕ್ರತೀರ್ಥರ ಕೃತಕ ಬುದ್ದಿವಂತಿಕೆ; ಭವಿಷ್ಯ ತಂತ್ರಜ್ಞಾನದ ಹೆಬ್ಬಾಗಿಲು ಎಂಬ ಲೇಖನ, ಅವರ ಸಂಪಾದಕತ್ವದ ಸೂತ್ರ ಪತ್ರಿಕೆಯ 2021ರ ಆಗಸ್ಟ್ ಸಂಚಿಕೆಯಲ್ಲಿ ಪ್ರಕಟವಾಗಿದೆ. ಪತ್ರಿಕೆಯಲ್ಲಿ ಲೇಖಕರ ಹೆಸರು ತತ್ವಬೋಧ ಎಂದಿದೆ. ಆದರೆ, ಕುವೆಂಪು ವಿಶ್ವವಿದ್ಯಾಲಯದ ಪಠ್ಯಪುಸ್ತಕದಲ್ಲಿ ರೋಹಿತ್ ಹೆಸರು ನಮೂದಿಸಲಾಗಿದೆ. ಇದು ಚಕ್ರತೀರ್ಥರ ಲೇಖನ. ಅರ್ಧ ಹೆಸರು ಬಳಸಿಕೊಂಡು ಸದಸ್ಯರ ಗಮನಕ್ಕೆ ತಾರದೇ ಪಠ್ಯಪುಸ್ತಕದಲ್ಲಿ ತುರುಕಲಾಗಿದೆ’ ಎನ್ನುವುದು ಸಮಿತಿಯ ಸದಸ್ಯರ ಆರೋಪವಾಗಿದೆ.
ಲೇಖನ ಬಳಕೆಗೆ ಪತ್ರಿಕೆಯ ಸಂಪಾದಕೀಯ ಬಳಗ ಅನುಮತಿ ನೀಡುವಾಗ ರೋಹಿತ್ ಬೆಂಗಳೂರು ಎಂದು ಹಾಕುವಂತೆ ಸೂಚಿಸಿತ್ತು. ಹಾಗಾಗಿ, ಅವರು ಸೂಚಿಸಿದ ಹೆಸರು ಬಳಸಲಾಗಿದೆ ಎಂದು ಕನ್ನಡ ಭಾಷಾ ಪಠ್ಯಪುಸ್ತಕ ಸಮಿತಿಯ ಸಂಪಾದಕ ಎಚ್.ಎಸ್.ರಘುನಾಥ ಹೇಳಿದ್ದಾರೆ.
ಅಲ್ಲದೇ, ಇದೇ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಆರ್ಎಸ್ಎಸ್ನ ಎಂ.ಎಸ್.ಗೋಳ್ವಾಲ್ಕರ್ ಅವರ ಬಗೆಗಿನ ಲೇಖನಕ್ಕೂ ಆಕ್ಷೇಪ ವ್ಯಕ್ತವಾಗಿದೆ. ಪ್ರೊ.ಮುಜಾಪರ್ ಅಸಾದಿ ಈ ಬಗ್ಗೆ ಆಕ್ಷೇಪವೆತ್ತಿದ್ದಾರೆ.
ರಾಜ್ಯ ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಅವರ ನೇತೃತ್ವದಲ್ಲಿ ಸಿದ್ದಗೊಂಡಿದ್ದ ಕನ್ನಡ ಮತ್ತು ಸಮಾಜ ವಿಜ್ಞಾನ ವಿಭಾಗದ ಪುಸ್ತಕಗಳ ಬಗ್ಗೆ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿದ್ದವು. ಈ ಕಾರ್ಯದಿಂದ ಸರ್ಕಾರ ಪೇಚಿಗೆ ಸಿಲುಕಿಕೊಂಡಿತ್ತು. ಅಲ್ಲದೇ, ಇದೇ ಮೊದಲ ಬಾರಿಗೆ ತಪ್ಪುಗಳ ತಿದ್ದುಪಡಿಗಾಗಿ ರಾಜ್ಯ ಸರ್ಕಾರ ಮತ್ತೊಂದು ಕೈಪಿಡಿಯನ್ನು ಬಿಡುಗಡೆ ಮಾಡಿತ್ತು. ಇದನ್ನೂ ಓದಿ : ರೋಹಿತ್ ಚಕ್ರತೀರ್ಥರಿಂದ ‘ಸಂವಿಧಾನ ಶಿಲ್ಪಿ’ ಅಂಬೇಡ್ಕರ್ ಗೆ ಮತ್ತೊಮ್ಮೆ ಅಪಮಾನ