ಧರ್ಮ ರಾಜಕಾರಣದ ಹಸು ಬರಡಾಗುತ್ತಿರುವುದನ್ನು ಕಂಡ ಬಿಜೆಪಿ ನಾಯಕರು ಈಗ ಭಾಷಾ ರಾಜಕಾರಣದ ಹಸುವಿನ ಕೆಚ್ಚಲಿಗೆ ಕೈ ಹಾಕಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಬಿಜೆಪಿಯ ಕೆಲವು ಸಚಿವರ ಹೇಳಿಕೆಗಳನ್ನು ಲಗತ್ತಿಸಿ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಧರ್ಮ ರಾಜಕಾರಣದ ಹಸು ಬರಡಾಗುತ್ತಿರುವುದನ್ನು ಕಂಡ ಬಿಜೆಪಿ ನಾಯಕರು ಈಗ ಭಾಷಾ ರಾಜಕಾರಣದ ಹಸುವಿನ ಕೆಚ್ಚಲಿಗೆ ಕೈ ಹಾಕಿದ್ದಾರೆ. ಈ ಸ್ವಾರ್ಥ ರಾಜಕಾರಣಕ್ಕೆ ಸ್ವಾಭಿಮಾನಿ ಕನ್ನಡಿಗರು ತಕ್ಕ ಉತ್ತರ ನೀಡಲಿದ್ದಾರೆ.
ಭಾಷೆ, ಪ್ರದೇಶಗಳ ನಮ್ಮ ನೀತಿ-ನಿಲುವು “ಜಯಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ… ಎನ್ನುವ ಕುವೆಂಪು ಅವರ ಕವಿ ನುಡಿಯಿಂದ ಪ್ರೇರಿತವಾದುದು. ಕನ್ನಡ ಭಾಷೆ ನಮಗೆ ರಾಜಕಾರಣದ ಆಯುಧ ಅಲ್ಲ, ಇದು ನಮ್ಮ ಜೀವದ ಉಸಿರು.
ಇಂಗ್ಲೀಷ್, ಹಿಂದಿ ಎಲ್ಲ ಭಾಷೆಗಳ ಬಗ್ಗೆ ನಮಗೆ ಗೌರವ ಇದೆ, ಇವೆಲ್ಲವೂ ಬೇಕು. ಈ ಭಾಷೆಗಳ ಮೂಲಕ ಹರಿದು ಬರುವ ಜ್ಞಾನದ ಅಮೃತವೂ ಬೇಕು. ಆದರೆ ಕನ್ನಡಕ್ಕೆ ಮೊದಲ ಆದ್ಯತೆ, ಮಾತೃಭಾಷೆಗೆ ಮೊದಲ ಪೂಜೆ.
ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ. ಪ್ರತಿಯೊಂದು ರಾಜ್ಯಭಾಷೆಯೂ ನಮ್ಮ ರಾಷ್ಟ್ರಭಾಷೆ, ನೆಲದ ಸಾರ್ವಭೌಮ ಭಾಷೆ. ಇದನ್ನೂ ಸಂವಿಧಾನವೂ ಅಂಗೀಕರಿಸಿದೆ. ಸಂವಿಧಾನವನ್ನೇ ವಿರೋಧಿಸುವ ದೇಶದ್ರೋಹಿಗಳಿಗೆ ಈ ಸಾಮಾನ್ಯ ಜ್ಞಾನದ ಅರಿವಿರಲಿ.
ಹಿಂದಿ ಭಾಷೆಯ ವಕಾಲತು ಮಾಡಲು ಹೊರಟಿರುವ ಸಿಟಿ ರವಿ, ಮುರುಗೇಶ್ ನಿರಾಣಿ, ರಮೇಶ್ ಜಿಗಜಿಣಗಿ ಮೊದಲಾದವರಿಗೆ ಆ ಭಾಷೆಯ ಬಗ್ಗೆಯೂ ಪ್ರೀತಿ ಇಲ್ಲ. ಇವರೆಲ್ಲ ತಮ್ಮ ದೆಹಲಿ ದೊರೆಗಳನ್ನು ಓಲೈಸಲು ಹೊರಟಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಹಿಂದಿ ಪರ ವಕಾಲತು ಮಾಡಿದ ಕೂಡಲೇ ರಾಜ್ಯದ ಬಿಜೆಪಿ ನಾಯಕರು ಅವರನ್ನು ಓಲೈಸಲು ಸಾಲಲ್ಲಿ ನಿಂತಿದ್ದಾರೆ. ಬಿಜೆಪಿ ನಾಯಕರೇ, ಅಮಿತ್ ಶಾ ಅವರ ಗುಲಾಮರಾಗಬೇಡಿ, ಕನ್ನಡ ತಾಯಿಯ ಸ್ವಾಭಿಮಾನಿ ಮಕ್ಕಳಾಗಿ. ನಾನು ಇಂದು, ಮುಂದು, ಎಂದೆಂದೂ ಒಬ್ಬ ಕನ್ನಡದ ಕಾವಲುಗಾರ. ಕಳ್ಳರ ಜೊತೆ ಷಾಮೀಲಾಗುವ ಡೋಂಗಿ ಚೌಕಿದಾರ ಅಲ್ಲ.
ನಮ್ಮ ಚಂದನವನದ ಕನ್ನಡ ಚಿತ್ರಗಳು, ಬಾಲಿವುಡ್ ಚಿತ್ರಗಳಿಗೆ ಸೆಡ್ಡು ಹೊಡೆದು ರಾಷ್ಟ್ರಮಟ್ಟದಲ್ಲಿ ಯಶಸ್ಸು ಕಾಣುವುದನ್ನು ಸಹಿಸದ ಹಿಂದಿ ಚಿತ್ರನಟರು ಕನ್ನಡದ ವಿರುದ್ಧ ನಂಜು ಕಾರುತ್ತಿದ್ದಾರೆ. ಕನ್ನಡ ಚಿತ್ರರಂಗ ಇದಕ್ಕೆ ಒಕ್ಕೊರಲಿನ ಉತ್ತರ ನೀಡಬೇಕಾಗಿದೆ ಎಂದು ಸಿದ್ದರಾಮಯ್ಯನವರು ಬಿಜೆಪಿಯ ವಿರುದ್ಧ ಕಿಡಿಕಾರಿದ್ದಾರೆ.