ಅಪ್ಪು.. ಪುನೀತ್ ರಾಜಕುಮಾರ್.. ನೀನೇ ಕಣಯ್ಯಾ ಹೆಸರಿಗೆ ತಕ್ಕ ರಾಜಕುಮಾರ.. ಯಾಕಂದರೆ.. ಭಾರತೀಯ ಚಿತ್ರೋದ್ಯಮದ ಇತಿಹಾಸದಲ್ಲೇ ಬೇರೆ ಯಾವ ನಟನೂ ಸಂಪಾದಿಸಲಾಗದ ಸ್ಥಾನ ಅಪ್ಪು ಪುನೀತ್ ಗೆ ಮಾತ್ರ ಸ್ವಂತ.. ಅದೇನು ಗೊತ್ತಾ..?
‘ಅಮ್ಮಾ.. ಅವರ ಫೋಟೋನಾ ಏಕೆ ವಾಟ್ಸಪ್ ಸ್ಟೇಟಸ್ ಗೆ ಹಾಕಿಕೊಂಡಿದ್ದೀಯಾ?’ ಎಂಬ ಮಗನ ಪ್ರಶ್ನೆಗೆ
“ಕೇಳು ಮಗಾ ಇಲ್ಲಿ.. ಅವರು ಕನ್ನಡದ ಹೀರೋ ಅಂತೆ.. ತುಂಬಾ ಒಳ್ಳೆಯವರಾಗಿದ್ರಂತೆ.. 45 ಸ್ಕೂಲ್ ಕಟ್ಟಿಸಿದ್ದಾರಂತೆ… 26ಅನಾಥಾಶ್ರಮ, 16 ಓಲ್ಡ್ ಏಜ್ ಹೊಮ್ಸ್ ನಡೆಸುತ್ತಾ ಇದ್ದರಂತೆ.19ಗೋಶಾಲೆ ಕೂಡಾ ಇವೆಯಂತೆ.. ಸತ್ತು ಹೋದರೂ ತಮ್ಮ ಎರಡೂ ಕಣ್ಣು ದಾನ ಮಾಡಿದರಂತೆ.. ಇಷ್ಟು ಒಳ್ಳೆಯವರು ಈ ಕಾಲದಲ್ಲೂ ಇರಲಿಕ್ಕೆ ಸಾಧ್ಯನಾ ಹೇಳು..?
ಅದಕ್ಕೆ ಸ್ಟೇಟಸ್ ಗೆ ಹಾಕ್ಕೊಂಡೇ.. “ ಎಂದು ಆ ತಾಯಿ ಉತ್ತರಿಸುತ್ತಾರೆ.
ಈ ಘಟನೆ ನಡೆದಿದ್ದು ಆಂಧ್ರದಲ್ಲಿ.. ಆಂಧ್ರಪ್ರದೇಶ ನಮಗೆ ನೆರೆಯ ರಾಜ್ಯ ಆಗಿರಬಹುದು.. ಆದರೆ, ಅಪ್ಪು ಅಕಾಲ ಮೃತ್ಯು ಸೆರೆ ಆಗುವ ಮುನ್ನ, ತೆಲುಗು ರಾಜ್ಯಗಳ ಜನತೆಗೂ ಅಷ್ಟಾಗಿ ಗೊತ್ತಿರಲಿಲ್ಲ. ಏಕೆಂದರೇ ಅವರೇನು ತೆಲುಗು ಸಿನೆಮಾದಲ್ಲಿ ನಟಿಸಿದವರಲ್ಲ..
ನಾವೆಲ್ಲರೂ ಒಂದು ಚಿಕ್ಕ ಸಹಾಯ ಮಾಡಿ, ಅದೇ ಊರಿಗೆಲ್ಲಾ ಗೊತ್ತಾಗಬೇಕು ಎಂದು ಬಯಸುವ ಜನ.. ಆದರೆ, ಸ್ಟಾರ್ ಹೀರೋ ಆಗಿದ್ದುಕೊಂಡು, ಬಲಗೈಯಲ್ಲಿ ಮಾಡಿದ ದಾನ, ಸಹಾಯ ಎಡಗೈಗೆ ಗೊತ್ತಾಗದಂತೆ ಬಾಳಿ ಬದುಕಿದವರು ಪುನೀತ್. ಅಪ್ಪು ಒಳ್ಳೆಯ ಕೆಲಸಗಳು ಖುದ್ದು ಅವರ ಸಹೋದರರಿಗೂ ಗೊತ್ತಿರಲಿಲ್ಲ. ಅಪ್ಪು ಇಲ್ಲವಾದ ಮೇಲೆಯೇ ಅವರ ಅವರ ಸಹಾಯಹಸ್ತ ಎಲ್ಲಿಯವರೆಗೆ ಚಾಚಿದೆ ಎಂಬುದು ಜಗತ್ತಿಗೆ ಗೊತ್ತಾಗಿದ್ದು.
ಎಷ್ಟು ವರ್ಷ ಬದುಕಿರುತ್ತೇವೆ ಎನ್ನುವುದು ಮುಖ್ಯವಲ್ಲ.. ಇರುವಷ್ಟು ಕಾಲ ಹೇಗೆ ಬದುಕಿ ಬಾಳಿದೆವು ಎಂಬುದು ಮುಖ್ಯ.. ನಾವು ಹೇಗೆ ಬದುಕಿದೆವು ಎಂಬುದರ ಮೇಲೆ ಜನರ ಮನಸ್ಸಲ್ಲಿ ನಾವೆಷ್ಟು ದಿನ ಉಳಿಯುತ್ತೇವೆ ಎಂಬುದು ನಿರ್ಧಾರಿತ ಆಗುತ್ತದೆ.
ಆರು ತಿಂಗಳ ಹಿಂದೆ ಪುನೀತ್ ಹಠಾತ್ ಮರಣ ಕೇವಲ ಅಪ್ಪು ಅಭಿಮಾನಿಗಳನ್ನು ಮಾತ್ರವಲ್ಲ, ಕರುನಾಡಿಗೆ ಯಾವ ರೀತಿಯಲ್ಲೂ ಸಂಬಂಧವಿಲ್ಲದ ಜನರ ಕಣ್ಣಾಲಿ ತುಂಬುವಂತೆ ಮಾಡಿತ್ತು.
ಕೊರೋನಾ ಮಾರಿಯನ್ನು ಲೆಕ್ಕಿಸದೇ ಲಕ್ಷಾಂತರ ಜನ ಅಪ್ಪು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು ಎಂಬುದನ್ನು ನೋಡಿದರೇ ಸಾಕು, ಅಪ್ಪು ಸಂಪಾದಿಸಿದ ಅಭಿಮಾನ ಎಷ್ಟು ದೊಡ್ಡದು ಎಂದು ಗೊತ್ತಾಗುತ್ತದೆ.. ಈ ಅಭಿಮಾನ ಚಿರಕಾಲ ಇರುತ್ತದೆ ಕೂಡ.. ಇಂದು ಅಪ್ಪು ಜನ್ಮ ದಿನ.. ಅವರು ನಮ್ಮೊಡನೆ ಇದ್ದಿದ್ದರೆ..? ಇದ್ದಿದ್ದರೆ ಎಂಬ ಪ್ರಶ್ನೆಯೇ ಸರಿಯಲ್ಲ.. ಅಪ್ಪು ನಮ್ಮೊಂದಿಗೆ ಎಂದೆಂದಿಗೂ ಜೀವಂತ.