ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೇ ಅಭಿನಯದ ಬಹುನಿರೀಕ್ಷಿತ ‘ಲೈಗರ್’ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ 25ರಂದು ವರ್ಲ್ಡ್ ವೈಡ್ ಚಿತ್ರ ತೆರೆಗೆ ಬರ್ತಿದೆ. ಈ ಹಿನ್ನೆಲೆ ಲೈಗರ್ ಟೀಂ ಅದ್ಧೂರಿಯಾಗಿ ಪ್ರಮೋಷನ್ ನಡೆಸ್ತಿದೆ. ಸಿನಿಮಾದ ಪ್ರಚಾರಕ್ಕೂ ಮುನ್ನ ಕೆಂಪೇಗೌಡ ಏರ್ ಪೋರ್ಟ್ ಗೆ ಬಂದಿಳಿದ ಚಿತ್ರದ ನಾಯಕ ವಿಜಯ್ ದೇವರಕೊಂಡ, ನಾಯಕಿ ಅನನ್ಯಾ ಪಾಂಡೆ ಹಾಗೂ ವಿಶ್ ನೇರ ಏರ್ ಪೋರ್ಟ್ ನಿಂದ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಭೇಟಿ ಕೊಟ್ಟು ಪುಷ್ಪ ನಮನ ಸಲ್ಲಿಸಿದರು. ಆ ಬಳಿಕ ಮಾಧ್ಯಮದೊಟ್ಟಿಗೆ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.
ಕನ್ನಡದಲ್ಲಿಯೇ ಮಾತು ಆರಂಭಿಸಿದ ವಿಜಯ್ ಬೆಂಗಳೂರು ಯಾವಾಗಲೂ ನನಗೆ ಪ್ರೀತಿ ನೀಡಿದೆ. ಲೈಗರ್ ನನ್ನ ವೃತ್ತಿ ಜೀವನದ ದೊಡ್ಡ ಸಿನಿಮಾ. ಇದು ಮಾಸ್ ಎಂಟರ್ ಟೈನರ್ ಚಿತ್ರ. ನಾನು ಈ ಚಿತ್ರಕ್ಕೆ ಕನ್ನಡದಲ್ಲಿ ಡಬ್ ಮಾಡಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ನನ್ನ ಪಾತ್ರಕ್ಕೆ ನಾನು ಡಬ್ ಮಾಡುತ್ತೇನೆ ಎಂದರು.
ಅಪ್ಪು ಜೊತೆಗಿನ ಒಡನಾಟದ ಬಗ್ಗೆ ಮೆಲುಕು ಹಾಕಿದ ವಿಜಯ್, ನಾನು ಬೆಂಗಳೂರಿಗೆ ಬಂದಾಗಲೆಲ್ಲ ಪುನೀತ್ ಅಣ್ಣನನ್ನು ಮೀಟ್ ಮಾಡಿ ಹೋಗುತ್ತಿದ್ದೆ. ಅವರು ನನ್ನ ಸಿನಿಮಾಗಳನ್ನು ನೋಡಿ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಹಾಗೇ ಶಿವಣ್ಣ ಕೂಡ ನನ್ನ ಸಿನಿಮಾ ನೋಡಿ ಫೋನ್ ಮಾಡಿ ಮಾತನಾಡಿದ್ದು ಇದೆ ಅಂತಾ ರಾಜ್ ಕುಟುಂಬದೊಂದಿಗಿನ ಬಾಂಧವ್ಯವನ್ನು ನೆನಪಿಸಿಕೊಂಡರು.
ಇದನ್ನೂ ಓದಿ : ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಸಿನೆಮಾ ಥೀಮ್ ಸಾಂಗ್ ಬಿಡುಗಡೆ
ವಿಜಯ್ ಎದುರು ವಿಲನ್ ಆಗಿ ತೊಡೆ ತಟ್ಟಿರುವ ವಿಶ್ ಮಾತನಾಡಿ, ನಿಮ್ಮನ್ನು ನೋಡಿ ತುಂಬಾ ಸಂತೋಷವಾಗಿದೆ. ವಿಜಯ್ ಹಾಗೂ ಪುರಿ ಸರ್ ಜೊತೆ ಕೆಲಸ ಮಾಡಿದ್ದು ಖುಷಿಕೊಟ್ಟಿದೆ. ವಿಜಯ್ ಅದ್ಭುತ ನಟ.. ಅನನ್ಯಾ ತುಂಬಾ ಚೆಂದ ಕಾಣಿಸ್ತಾರೆ. ಅಪ್ಪು ಅಣ್ಣ ಮಿಸ್ ಯೂ. ಪುರಿ ಸರ್ ಮೊದಲು ನಿರ್ದೇಶನ ಮಾಡಿದ್ದು ಅಪ್ಪು ಅಣ್ಣನಿಗೆ. ಪ್ರತಿಯೊಬ್ಬರು 25ಕ್ಕೆ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಎಂದು ಮನವಿ ಮಾಡಿಕೊಂಡರು.
ಮಂತ್ರಿ ಮಾಲ್ ನಲ್ಲಿ ವಿಜಯ್ ಫ್ಯಾನ್ಸ್ ಅಬ್ಬರ
ಸುದ್ದಿಗೋಷ್ಠಿ ಬಳಿಕ ಲೈಗರ್ ಟೀಂ, ನಗರದ ಮಂತ್ರಿ ಮಾಲ್ ನಲ್ಲಿ ಪ್ರೀ ರಿಲೀಸ್ ಇವೆಂಟ್ ಹಮ್ಮಿಕೊಂಡಿತ್ತು. ವಿಜಯ್ ಆಗಮಿಸ್ತಿದ್ದಾರೆ ಅಂತಾ ಗೊತ್ತಾಗ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ನೆರೆದಿದ್ದರು. ವಿಜಯ್ ಕಂಡು ಫ್ಯಾನ್ಸ್ ಅಬ್ಬರ ಮುಗಿಲುಮುಟ್ಟಿತ್ತು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳನ್ನು ಕಂಡು ರೌಡಿಬಾಯ್ ಕ್ಲೀನ್ ಬೋಲ್ಡ್ ಆದರು.
ಲೈಗರ್ ಸಿನಿಮಾ ವಿಶ್ವದಾದ್ಯಂತ ಪಂಚ ಭಾಷೆಯಲ್ಲಿಯೂ ರಿಲೀಸಾಗ್ತಿದೆ. ಈ ಚಿತ್ರಕ್ಕೆ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದು ಧರ್ಮ ಪ್ರೊಡಕ್ಷನ್ ಹಾಗೂ ಪುರಿ ಕನೆಕ್ಟ್ಸ್ ನಡಿ, ಚಾರ್ಮಿ ಕೌರ್, ಪುರಿ ಜಗನ್ನಾಥ್, ಕರಣ್ ಜೋಹಾರ್ ಬಂಡವಾಳ ಹೂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟ್ರೈಲರ್ ಹಾಡು ಮತ್ತು ಟೀಸರ್ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ವಿಜಯ್ ದೇವರಕೊಂಡ ಮೆರವಣಿಗೆ ಹೊರಡಲಿದ್ದಾರೆ.