ADVERTISEMENT
NDTV. 1988ರಲ್ಲಿ ಆಗ ಸರ್ಕಾರಿ ವಾಹಿನಿ ದೂರದರ್ಶನಕ್ಕೆ ಕಾರ್ಯಕ್ರಮಗಳನ್ನು ನಿರ್ಮಿಸಿಕೊಡುತ್ತಿದ್ದ ಪ್ರಣಯ್ರಾಯ್ ಮತ್ತು ರಾಧಿಕಾ ರಾಯ್ ದಂಪತಿ ಆರಂಭಿಸಿದ ದೇಶದ ಮೊದಲ ಖಾಸಗಿ ಸುದ್ದಿವಾಹಿನಿ.
34 ವರ್ಷಗಳ ಹಳೆಯ ನ್ಯೂ ಡೆಲ್ಲಿ ಟೆಲಿವಿಷನ್ ಲಿಮಿಟೆಡ್ ಸಾಲದ ಸುಳಿಯಲ್ಲಿ ಸಿಲುಕಿ ಈಗ ಅದಾನಿ ಪಾಲಾಗುವ ಮೂಲಕ ನಿಷ್ಪಪಕ್ಷಪಾತ ಪತ್ರಿಕೋದ್ಯಮ ಬೇಕೆಂದು ಕೇಳುವ ಮತ್ತು ನೋಡುವ ವೀಕ್ಷಕರಿಗೆ ಆಘಾತ ನೀಡಿದೆ.
ಭಾರತದಲ್ಲಿ ಮೊದಲ ಖಾಸಗಿ ಲೈಪ್ ಸ್ಟೈಲ್ ಚಾನೆಲ್ನ್ನೂ ಆರಂಭಿಸಿದ್ದ NDTV ಈಗ ಮೂರು ಚಾನೆಲ್ಗಳನ್ನು ಹೊಂದಿದೆ, ಅದೇ NDTV (ಇಂಗ್ಲೀಷ್ ವಾಹಿನಿ), NDTV India ಮತ್ತು NDTV Profit (ಬ್ಯುಸಿನೆಸ್ ವಾಹಿನಿ).
TRPಯಲ್ಲಿ ಹೇಳಿಕೊಳ್ಳುವ ಹೆಗ್ಗಳಿಕೆ ಇಲ್ಲದೇ ಇದ್ದರೂ ಡಿಜಿಟಲ್ನಲ್ಲಿ NDTV ಅತ್ಯಂತ ಪ್ರಭಾವಿ ಮಾಧ್ಯಮ. ರವೀಶ್ ಕುಮಾರ್ ಅವರಂತ ಪ್ರತಕರ್ತನನ್ನು ಕೊಟ್ಟ ಮಾಧ್ಯಮ. NDTV India ಯೂಟ್ಯೂಬ್ 1.4 ಕೋಟಿ ಸಬ್ ಸ್ಟ್ರೈಬರ್ಸ್ಗಳನ್ನು ಹೊಂದಿದೆ. NDTV 1.2 ಕೋಟಿ ಸಬ್ ಸ್ಕ್ರೈಬರ್ಸ್ನ್ನು ಹೊಂದಿದೆ.
NDTV ತನ್ನ ಡಿಜಿಟಲ್ ಮೀಡಿಯಾದ ಮೂಲಕವೇ ಕಳೆದ ತ್ರೈಮಾಸಿಕ ಅವಧಿಯಲ್ಲಿ 23 ಕೋಟಿ ರೂಪಾಯಿ ಆದಾಯ ಗಳಿಸಿದೆ. 13 ಕೋಟಿ ರೂಪಾಯಿಯಷ್ಟು ದಾಖಲೆಯ ಲಾಭ ಗಳಿಸಿದೆ.
NDTV ಸಮೂಹ ಕಳೆದ ಆರ್ಥಿಕ ವರ್ಷದಲ್ಲಿ 421 ಕೋಟಿ ರೂಪಾಯಿ ಆದಾಯ ಗಳಿಸಿತ್ತು, 85 ಕೋಟಿ ರೂಪಾಯಿ ಲಾಭ ಗಳಿಸಿತ್ತು.
ಇದನ್ನೂ ಓದಿ: ಚಿರು ಸರ್ಜಾ, ಪುನೀತ್, ಸೋನಾಲಿ ಪೊಗಾಟ್ – ಭಾರತೀಯ ಯುವಕರಲ್ಲೇಕೆ ಹೃದಯಾಘಾತ ಹೆಚ್ಚು
ಸಾಲದ ಸುಳಿ:
ವಿಶ್ವದ ನಾಲ್ಕನೇ ಅತೀ ದೊಡ್ಡ ಶ್ರೀಮಂತ ಎಂದು ಬಿರುದಾಂಕಿತರಾಗಿರುವ ಗುಜರಾತ್ ಮೂಲದ ಉದ್ಯಮಿ ಗೌತಮ್ ಅದಾನಿ ಹೆಣೆದ ಜೇಡರ ಬಲೆಯೊಳಗೆ NDTV ಸಿಲುಕಲು ಕಾರಣ ಟಿವಿ ಸಂಸ್ಥೆ ಮೇಲಿದ್ದ ಸಾಲದ ಹೊರೆ.
2008ರಲ್ಲಿ NDTV ಸುದ್ದಿಸಂಸ್ಥೆ ಬ್ಯಾಂಕೇತರ ಹಣಕಾಸು ಸಂಸ್ಥೆ ಇಂಡಿಯಬುಲ್ಸ್ಗೆ 540 ಕೋಟಿ ರೂಪಾಯಿ ಸಾಲವನ್ನು ಮರು ಪಾವತಿ ಮಾಡಬೇಕಿತ್ತು. ಈ ಸಾಲ ಮರು ಪಾವತಿಗಾಗಿ ಎನ್ಡಿಟಿವಿ ಖಾಸಗಿ ವಲಯದ ಬ್ಯಾಂಕ್ ICICI ಬ್ಯಾಂಕ್ನಿಂದ 375 ಕೋಟಿ ರೂಪಾಯಿ ಸಾಲ ಪಡೆದಿತ್ತು.
ICICI ಬ್ಯಾಂಕ್ನಿಂದ ಪಡೆದಿದ್ದ ಸಾಲವನ್ನು ಪಾವತಿಸುವ ಸಲುವಾಗಿ NDTV 2009ರಲ್ಲಿ ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ (VCPL)ನಿಂದ 403 ಕೋಟಿ ರೂಪಾಯಿ ಸಾಲ ಪಡೆದಿತ್ತು.
VCPLನಿಂದ NDTVಗೆ ಕೊಟ್ಟ ಸಾಲಕ್ಕೆ ಬಡ್ಡಿ ಇರಲಿಲ್ಲ. ಆದರೆ 10 ವರ್ಷದೊಳಗೆ 2019ರೊಳಗೆ ಈ ಸಾಲವನ್ನು ಮರು ಪಾವತಿ ಮಾಡಬೇಕಿತ್ತು. ಒಂದು ಸಾಲ ಮರು ಪಾವತಿ ಮಾಡದೇ ಇದ್ದರೆ RRPR ಹೋಲ್ಡಿಂಗ್ಸ್ನಲ್ಲಿ ಶೇಕಡಾ 29.18ರಷ್ಟು ಷೇರುಗಳನ್ನು ಕಾನೂನುಬದ್ಧವಾಗಿ VCPL ಪಾಲಿನ ಷೇರು ಆಗಿ ಬದಲಾಯಿಸುವ ಒಪ್ಪಂದ ಆಗಿತ್ತು.
ಸಾಲ ಮರು ಪಾವತಿಗೆ NDTV ಗ್ರೂಪ್ ವಿಫಲವಾದ ಹಿನ್ನೆಲೆಯಲ್ಲಿ ಈಗ VCPL ಶೇಕಡಾ 29.18ರಷ್ಟು ಷೇರನ್ನು ತನ್ನ ಪಾಲಿನ ಷೇರಾಗಿ ವರ್ಗಾಯಿಸಿಕೊಂಡಿದೆ.
ನೇರವಾಗಿ ಖರೀದಿಸಿಲ್ಲ ಅದಾನಿ:
ಅಂದಹಾಗೆ NDTVಯನ್ನು ಅದಾನಿ ನೇರವಾಗಿ ಖರೀದಿಸಿಲ್ಲ. ಬದಲಿಗೆ NDTVಯಲ್ಲಿ ಶೇಕಡಾ 29.18ರಷ್ಟು ಷೇರನ್ನು ಹೊಂದಿರುವ VCPL ಕಂಪನಿಯನ್ನು ಅದಾನಿ ಎಂಟರ್ಪ್ರೈಸಸ್ನ ಸಹವರ್ತಿ ಕಂಪನಿ ಆಗಿರುವ Adani Media Networks Limited ಖರೀದಿ ಮಾಡಿದೆ. ಈ ಮೂಲಕ ಅದಾನಿ ಕಂಪನಿಗೆ ಮೊದಲ ಹಂತದ ಜಯ ಸಿಕ್ಕಿದೆ.
ಷೇರು ವಿನಿಮಯ ಮಂಡಳಿ (SEBI) ನಿಯಮದ ಪ್ರಕಾರ ಉಳಿದ ಶೇಕಡಾ 26ರಷ್ಟನ್ನು ಷೇರನ್ನು ಖರೀದಿ ಮಾಡುವುದಾದರೆ ಅದನ್ನೂ ಆರಂಭಿಕ ಸಾರ್ವಜನಿಕ ಖರೀದಿ (IPO) ಮೂಲಕ ಖರೀದಿ ಮಾಡಬೇಕಾಗುತ್ತದೆ. ಈಗಾಗಲೇ AMNL, VCPL, ANL ಮೂರು ಕಂಪನಿಗಳು ಒಟ್ಟಾಗಿ ಶೇಕಡಾ 26ರಷ್ಟು ಷೇರು ಖರೀದಿಗೆ ಆಫರ್ ಮುಂದಿಟ್ಟಿವೆ.
ಒಂದು ವೇಳೆ ಈ ಶೇಕಡಾ 26ರಷ್ಟು ಷೇರನ್ನೂ ಅದಾನಿ ಕಂಪನಿ ಖರೀದಿಸಿದರೆ ಆಗ NDTVಯಲ್ಲಿ ಶೇಕಡಾ 55ರಷ್ಟು ಷೇರು ಅದಾನಿ ಕಂಪನಿಯ ಪಾಲಾಗಲಿದೆ.
ಸಾಲದ ಹಿಂದಿನ ವಿಚಿತ್ರಗಳು:
ಅಂದಹಾಗೆ NDTVಗೆ ಸಾಲ ಕೊಡಲು VCPLಗೆ 403 ಕೋಟಿ ರೂಪಾಯಿ ಬಂದಿದ್ದು ಎಲ್ಲಿಂದ..? VCPL ಕಂಪನಿ ಬಳಿ ಅದರದ್ದೇ ಆದ asset ಇಲ್ಲ. ಆದರೂ ಇಷ್ಟು ಸಾಲ ಕೊಟ್ಟಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ, ಈ 403 ಕೋಟಿ ರೂಪಾಯಿಯನ್ನು VCPLಗೆ ಕೊಟ್ಟಿದ್ದು ಇನ್ನೋರ್ವ ದೈತ್ಯ ಉದ್ಯಮಿ ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್. 2008ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ VCPLಗೆ 403.85 ಕೋಟಿ ರೂಪಾಯಿಯನ್ನು ನೀಡಿತು. ಅಷ್ಟೂ ಮೊತ್ತವನ್ನು 2009-2010ರಲ್ಲಿ NDTVಗೆ ಸಾಲವಾಗಿ ನೀಡಿತ್ತು VCPL.
2008ರಲ್ಲಿ ದೊಡ್ಡ ಉದ್ಯಮಿ ಆಗಿರದ ಅದಾನಿ ಈಗ ದೈತ್ಯ ಉದ್ಯಮಿ ಆಗಿ ಬೆಳೆದಿರುವ ಅದಾನಿ ಒಂದು ಕಾಲದಲ್ಲಿ ಉದ್ಯಮದಲ್ಲಿ ತಮ್ಮ ಪ್ರತಿಸ್ಪರ್ಧಿ ಆಗಿರುವ ಅಂಬಾನಿ ಸಾಲ ಕೊಟ್ಟಿದ್ದ VCPL ಕಂಪನಿಯನ್ನು 113 ಕೋಟಿ ರೂಪಾಯಿಗೆ ಖರೀದಿಸಿದೆ.
ಷೇರು ಲೆಕ್ಕಾಚಾರ:
ವಿಚಿತ್ರ ಎಂದರೆ ಒಂದು ಕಾಲಕ್ಕೆ ಪಾತಾಳಕ್ಕೆ ಕುಸಿದಿದ್ದ NDTVಯ 1 ಷೇರಿನ ಮೌಲ್ಯ ಈಗ 388 ರೂಪಾಯಿ. ಹಾಗಾದರೆ ಇಷ್ಟು ಬೇಗ ಷೇರು ಮೌಲ್ಯ ಹೆಚ್ಚಳ ಆಗಿದ್ದು ಹೇಗೆ ಎಂಬುದೇ ಸೋಜಿಗ. 70 ರೂಪಾಯಿ ಇದ್ದ ಒಂದು ಷೇರಿನ ಮೌಲ್ಯ 250 ರೂಪಾಯಿಗೆ ಏರಿಕೆ ಆಗಿ ಈಗ 388 ರೂಪಾಯಿಗೆ ಬಂದು ನಿಂತಿದೆ.
NDTVಯನ್ನು ಗೌತಮ್ ಅದಾನಿ ಖರೀದಿ ಮಾಡಲಿದ್ದಾರೆ ಎನ್ನುವುದು ಕಳೆದ ವರ್ಷದಿಂದಲೇ ಹರಿದಾಡುತ್ತಿತ್ತು. NDTVಯಲ್ಲಿ ಪಾಲು ಹೊಂದಿದ್ದ ಬಹುತೇಕ ಎಲ್ಲರಿಗೂ ಇದರ ಬಗ್ಗೆ ತಿಳಿದಿತ್ತು. ಈ ಕಾರಣದಿಂದಲೇ ಷೇರು ಮೌಲ್ಯ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಬಂತು.
IPO ಮೂಲಕ ಒಂದು ಷೇರಿಗೆ 296 ರೂಪಾಯಿ ಕೊಟ್ಟು ಶೇಕಡಾ 26ರಷ್ಟು ಷೇರು ಖರೀದಿಸುವುದಾಗಿ AMNL ಘೋಷಿಸಿದೆ.
SEBI ನಿಯಮಗಳ ಪ್ರಕಾರ ಷೇರಿನ ಎಂಟು ವಾರಗಳ ಮೌಲ್ಯದ ಸರಾಸರಿಯನ್ನು IPO ವೇಳೆ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ರಾಧಿಕಾ ಮತ್ತು ಪ್ರಣಯ್ ರಾಯ್ ಮುಂದಿನ ಹಾದಿಯೇನು..?
ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಇಬ್ಬರೂ ಎನ್ಡಿಟಿವಿಯಲ್ಲಿ ಶೇಕಡಾ 32ರಷ್ಟು ಷೇರನ್ನು ಹೊಂದಿದ್ದಾರೆ. ರಾಧಿಕಾ ರಾಯ್ ಶೇಕಡಾ 16.32ರಷ್ಟು ಮತ್ತು ಪ್ರಣಯ್ ರಾಯ್ ಶೇಕಡಾ 15.94ರಷ್ಟು ಷೇರು ಹೊಂದಿದ್ದಾರೆ.
ಆದರೆ LTS Investment Fund ಕಂಪನಿಯು NDTVಯಲ್ಲಿ ಶೇಕಡಾ 9.75ರಷ್ಟು ಷೇರನ್ನು ಹೊಂದಿದೆ. ಇದೇ ಕಂಪನಿ ಅದಾನಿ ಎಂಟರ್ಪ್ರೈಸಸ್ ಮಾತ್ರವಲ್ಲದೇ ಸಹವರ್ತಿ ಕಂಪನಿಗಳಾದ ಆದ ಅದಾನಿ ಪವರ್, ಅದಾನಿ ಟ್ರಾನ್ಸ್ಮಿಷನ್, ಅದಾನಿ ಟೋಟಲ್ ಗ್ಯಾಸ್ನಲ್ಲೂ ಹೂಡಿಕೆ ಹೊಂದಿದೆ.
ಒಂದು ವೇಳೆ LTS Investment Fund ತನ್ನ ಷೇರುಗಳನ್ನು IPO ಮೂಲಕ ಅದಾನಿ ಕಂಪನಿಗೆ ಮಾರಿದರೆ ಆಗ NDTVಯಲ್ಲಿ ಅದಾನಿ ಪಾಲು ಶೇಕಡಾ 46ಕ್ಕೆ ಏರಿಕೆ ಆಗಲಿದೆ. ಆ ಮೂಲಕ NDTV ಪೂರ್ಣ ಪ್ರಮಾಣದಲ್ಲಿ ಅದಾನಿ ತೆಕ್ಕೆಗೆ ಬರಲಿಕ್ಕೆ ಹಾದಿ ಇನ್ನಷ್ಟು ಸುಗಮ ಆಗಲಿದೆ.
ADVERTISEMENT