ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಹಾಲಿ ಸಂಸದ ಡಿ.ಕೆ. ಸುರೇಶ್ ಕನಕಪುರ ಕೆಂಕೇರಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿ ಉಮೇದುವಾರಿಕೆ ಸಲ್ಲಿಸಲಿದ್ದು, ಈ ಬಾರಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಅವರನ್ನು ಕಣದಲ್ಲಿ ಎದುರಿಸಲಿದ್ದಾರೆ.
ಸಹೋದರನ ಸ್ಪರ್ಧೆ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಗೆ ಮೊದಲ ಬಿ. ಫಾರ್ಮ್ ಸಿಕ್ಕಿದ್ದು, ಇವತ್ತು ನಾಮ ಪತ್ರ ಸಲ್ಲಿಸತ್ತಾರೆ. ಅದಕ್ಕೂ ಮೊದಲು ಮನೆ ದೇವರ ದರ್ಶನ ಪಡೆದು, ರಾಮನಗರ ಚಾಮುಂಡಿ ಬೆಟ್ಟಕ್ಕೆ ಹೋಗಿ ಬರಲಿದ್ದೇವೆ ಎಂದರು.
ಕೋವಿಡ್ ಸಂದರ್ಭದಲ್ಲಿ ಡಿ. ಕೆ. ಸುರೇಶ್ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅದನ್ನು ಜನರು ಮರೆಯಲು ಸಾಧ್ಯವೇ ಇಲ್ಲ. ಕ್ಷೇತ್ರದ ಜನತೆಗಾಗಿ ಆ ಸಂದರ್ಭದಲ್ಲಿ ಸಾಕಷ್ಟು ಕಾರ್ಯಗಳನ್ನು ಅವರು ಮಾಡಿದ್ದಾರೆ. ಪ್ರತಿ ಹಳ್ಳಿಹಳ್ಳಿಗೂ ಅವರು ಹೋಗಿದ್ದರು. ಸಂಸದನಾಗಿ ಅಲ್ಲ ಕಾರ್ಪೊರೇಟರ್, ಗ್ರಾಮ ಪಂಚಾಯತ್ ಸದಸ್ಯನ ರೀತಿ ಕಾರ್ಯ ನಿರ್ವಹಿಸಿ ಜನರ ಮನಗೆದ್ದಿದ್ದಾರೆ ಎಂದರು
ಜನತಾದಳ, ಬಿಜೆಪಿಯಂತೆ ನಮ್ಮಲ್ಲಿ ರಾಜಕಾರಣ, ಸಿಂಗಲ್ ಅಭ್ಯರ್ಥಿ ಏನೂ ಇಲ್ಲ. ಎದುರಾಳಿಯಾಗಿ ಯಾರೇ ಇದ್ದರೂ ನಾವು ಸತತವಾಗಿ ಹೋರಾಟ ಮಾಡಿ ಗೆದ್ದಿದ್ದೇವೆ. ಈ ಬಾರಿ ಬಿಜೆಪಿಯಿಂದ 10ಕ್ಕೂ ಹೆಚ್ಚು ಸೀಟ್ ಅನ್ನು ಹಾಲಿ ಸಂಸದರಿಗೆ ನೀಡಿಲ್ಲ. ಇದು ಅನ್ಯಾಯ ಎಂದ ಅವರು, ಸ್ಟಾರ್ ಪ್ರಚಾರಕರಾಗಿ ರಾಜ್ಯಕ್ಕೆ ರಾಹುಲ್ ಗಾಂಧಿ , ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಅವರು ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.