ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಈಗಾಗಲೇ ಕಾಂಗ್ರೆಸ್ ಗೆಲ್ಲುವ ಕುದುರೆಗಳ ಹುಡುಕಾಟದಲ್ಲಿದೆ.
ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಕುರಿತಾಗಿ ರಣತಂತ್ರ ರೂಪಿಸಲು ಹೊರಟಿರೋ ಕಾಂಗ್ರೆಸ್ ಬಿಜೆಪಿಗೆ ಸೋಲಿನ ರುಚಿ ತೋರಲು ಸನ್ನದ್ಧವಾಗ್ತಿದೆ. ಹೀಗಾಗಿ ಈಗಿನಿಂದಲೇ ಲೋಕಸಭಾ ಚುನಾವಣೆಗೆ ಸೂಕ್ತ ಅಭ್ಯರ್ಥಿಯ ಕುರಿತಾಗಿ ತಲೆ ಕೆಡಿಸಿಕೊಂಡಿದೆ. ರಾಜ್ಯದಲ್ಲಿ 11 ಸಚಿವರನ್ನು ಚುನಾವಣಾ ಅಖಾಡಕ್ಕಿಳಿಸಲು ಯೋಜನೆ ರೂಪಿಸುತ್ತಿದೆ.
ಕಳೆದ ತಿಂಗಳು ನಡೆದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇಂದ್ರ ಸಚಿವರನ್ನೇ ಸ್ಪರ್ಧೆಗಿಳಿಸಿತ್ತು. ರಾಜಸ್ಥಾನ, ಛತ್ತೀಸ್ ಗಢ ಮತ್ತು ರಾಜಸ್ಥಾನದಲ್ಲಿ ಕೇಂದ್ರ ಸಚಿವರು ಸ್ಪರ್ಧಿಸಿದ್ದ ಪರಿಣಾಮವಾಗಿ ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿ ಅಧಿಕಾರಕ್ಕೇರಿತ್ತು. ಇದೀಗ ಇದೇ ರಣತಂತ್ರವನ್ನು ಅನುಸರಿಸಲು ಹೊರಟಿರುವ ಕಾಂಗ್ರೆಸ್, ಜಿದ್ದಾಜಿದ್ದಿನ ಕಣಗಳಲ್ಲಿ ಪ್ರಭಾವಿ ಸಚಿವರನ್ನೇ ಕಣಕ್ಕಿಳಿಸೋಕೆ ತಯಾರಿ ನಡೆಸಿದೆ.
ಈ ಯೋಜನೆಯ ಪ್ರಕಾರ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕ್ಷೇತ್ರದಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ತುಮಕೂರಿನಿಂದ ಕೆ.ಎನ್.ರಾಜಣ್ಣ, ಚಾಮರಾಜನಗರದಿಂದ ಹೆಚ್.ಸಿ.ಮಹದೇವಪ್ಪ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ.
ಇನ್ನು ಜಿದ್ದಾಜಿದ್ದಿನ ಕಣ ಮಂಡ್ಯದಿಂದ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ, ಬಳ್ಳಾರಿಯಿಂದ ಸಚಿವ ಬಿ.ನಾಗೇಂದ್ರ, ಧಾರವಾಡದಿಂದ ಕಾರ್ಮಿಕ ಸಚಿವ ಸಂತೋಷ್ ಲಾಡ್ ರನ್ನು ಸ್ಪರ್ಧೆಗಿಳಿಸಲು ಹೈಕಮಾಂಡ್ ಸೂಚನೆ ನೀಡುವ ಸಾಧ್ಯತೆ ಇದೆ ಅಂತ ತಿಳಿದುಬಂದಿದೆ.
ಉಳಿದಂತೆ ,ಕೋಲಾರ ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿ ಯಾರು, ಕೆ.ಹೆಚ್.ಮುನಿಯಪ್ಪ, ಜಿ.ಪರಮೇಶ್ವರ್ ಸೇರಿದಂತೆ ಹಿರಿಯ ಸಚಿವರು ಎಲ್ಲಿ ಸ್ಪರ್ಧಿಸಿದ್ರೆ ಸೂಕ್ತ ಅನ್ನೋ ಕುರಿತಾಗಿ ಚರ್ಚೆ ನಡೆದಿವೆ.
ಇನ್ನು ವರ್ಚಸ್ವಿ ಸಚಿವರಿಂದಾಗಿ ಹೆಚ್ಚು ಸ್ಥಾನ ಗಿಟ್ಟಿಸಿಕೊಳ್ಳಲು ಹೊರಟಿರುವ ಕಾಂಗ್ರೆಸ್ ನ ಈ ತಂತ್ರದ ಹಿಂದೆ ಮತ್ತೊಂದು ಲೆಕ್ಕಾಚಾರ ಇದೆ. ಚುನಾವಣೆಯಲ್ಲಿ ಗೆದ್ದು ಲೋಕಸಭೆಗೆ ಪ್ರವೇಶ ಮಾಡುವ ಸಚಿವರಿಂದಾಗಿ ರಾಜ್ಯ ಸಚಿವ ಸಂಪುಟದಲ್ಲಿ ತೆರವಾಗುವ ಸ್ಥಾನವನ್ನು ಇತರೆ ಸಚಿವಾಕಾಂಕ್ಷಿಗಳಿಗೆ ಹಂಚಿಕೆ ಮಾಡಬಹುದು ಎಂಬ ಯೋಜನೆ ಹಾಕಿಕೊಂಡಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಗೆ ಹೈಕಮಾಂಡ್ ಕನಿಷ್ಠ 10 ಸಚಿವರ ಪಟ್ಟಿ ಮಾಡುವಂತೆ ಸೂಚನೆ ನೀಡಿದೆ.