ಕೋವಿಡ್ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಕೇವಲ ರಾಜಕೀಯ ಅಪಪ್ರಚಾರ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ತಂದ ಯೋಜನೆಗಳನ್ನೇ ಈಗಿನ ಸರ್ಕಾರ ಮುಂದುವರಿಸಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ನಾನು ಕೋವಿಡ್ ಸಮಯದಲ್ಲಿ ತಪ್ಪಾಗಿದ್ದಿದ್ದರೆ ಕ್ರಮ ಕೈಗೊಳ್ಳಬೇಕಿತ್ತು.
ಇದು ರಾಜಕೀಯ ಅಪಪ್ರಚಾರವಾಗಿದ್ದು, ಇದಕ್ಕೆ ನಾನು ಅಂಜುವುದಿಲ್ಲ. ನಾನು ಆರೋಗ್ಯ ಸಚಿವನಾಗಿ ತಂದ ಯೋಜನೆಗಳನ್ನು ಈಗಿನ ಸರ್ಕಾರ ಮುಂದುವರಿಸಿದೆ. ಡಯಾಲಿಸಿಸ್ ಸೈಕಲ್ ದುಪ್ಪಟ್ಟು, ನಮ್ಮ ಕ್ಲಿನಿಕ್, ನೇತ್ರ ಚಿಕಿತ್ಸೆ ಮೊದಲಾದ ಯೋಜನೆಗಳನ್ನು ಈಗಿನ ಸರ್ಕಾರ ಮುಂದುವರಿಸಿದೆ. ಪ್ರತಿ ಜಿಲ್ಲಾಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಸಿಗೆಗಳನ್ನು ಹೆಚ್ಚಿಸಲಾಗಿದೆ.
ನಾನು ಆರೋಗ್ಯ ಸಚಿವನಾಗಿ ಕೆಲಸ ಮಾಡಿದ್ದಕ್ಕೆ ತೃಪ್ತಿ ಇದೆ. ಯಾರಿಗಾದರೂ ಅನುಮಾನವಿದ್ದರೆ ರಸ್ತೆಯಲ್ಲಿ ಫಲಕ ಹಿಡಿಯದೆ ತನಿಖೆ ನಡೆಸುವ ಸಂಸ್ಥೆಗೆ ನೀಡಿ. ನನ್ನ ತಪ್ಪಿದ್ದರೆ ಶಿಕ್ಷೆ ಎದುರಿಸುತ್ತೇನೆ. ನಾನು ಅಂತಹ ಪಾಪದ ಕೆಲಸ ಮಾಡಿಲ್ಲ ಎಂದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ನೆಲಮಂಗಲಕ್ಕೆ ಈಗಾಗಲೇ ಭೇಟಿ ನೀಡಿದ್ದು, ಇನ್ನೂ ಯಲಹಂಕ ಮತ್ತು ಗೌರಿಬಿದನೂರಿಗೆ ಭೇಟಿ ನೀಡಬೇಕಿದೆ. ಭೇಟಿ ನೀಡಿದ ಕಡೆಗಳಲ್ಲಿ ಬಿಜೆಪಿ ನಾಯಕರು ಹಾಗೂ ಜೆಡಿಎಸ್ ಮುಖಂಡರು ಉತ್ತಮ ಸಹಕಾರ ನೀಡುತ್ತಿದ್ದಾರೆ. ವಿಧಾನಸಭಾ ಚುನಾವಣೆಗೂ ಈ ಚುನಾವಣೆಗೂ ವಾತಾವರಣದಲ್ಲಿ ಬಹಳ ವ್ಯತ್ಯಾಸವಿದೆ. ಎಲ್ಲರೂ ಕುಟುಂಬದ ಸದಸ್ಯರಾಗಿದ್ದು, ಅವರು ಕೇಳುವ ಪ್ರಶ್ನೆಗೆ ಉತ್ತರ ನೀಡುವುದು ನನ್ನ ಕರ್ತವ್ಯ. ಕೆಲವರು ಆಗಿರದ ಕೆಲಸಗಳ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಇವೆಲ್ಲವನ್ನೂ ಮೀರಿ ನಾವು ಚುನಾವಣೆ ಎದುರಿಸುತ್ತಿದ್ದೇವೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಮುಂದೆ ಬೇರೆಯವರಿಗೂ ಅವಕಾಶ ಸಿಗಬಹುದು. ಯಾರೂ ಭಿನ್ನವಾಗಿ ಮಾತನಾಡದೆ ಮೋದಿಯವರನ್ನು ಗೆಲ್ಲಿಸೋಣ ಎಂದರು.
ಮಠಗಳಿಗೆ ಭೇಟಿ
ಬೆಂಗಳೂರಿನ ವಿಜಯನಗರದ ಶ್ರೀ ಆದಿಚುಂಚನಗಿರಿ ಶಾಖಾ ಮಠದಲ್ಲಿ ಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಡಾ.ಕೆ.ಸುಧಾಕರ್ ಭೇಟಿಯಾಗಿ ಆಶೀರ್ವಾದ ಪಡೆದರು.
ನಂತರ ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ತ್ರಿವಿಧ ದಾಸೋಹಿ, ಲಿಂಗೈಕ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳ ಗದ್ದುಗೆಯ ದರ್ಶನ ಪಡೆದು, ಪೀಠಾಧೀಶರಾದ ಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು. ನಂತರ ನೆಲಮಂಗಲ ತಾಲೂಕಿನ ಶ್ರೀ ಮೇಲಣಗವಿ ವೀರ ಸಿಂಹಾಸನ ಸಂಸ್ಥಾನ ಮಠಕ್ಕೆ ಭೇಟಿ ನೀಡಿ ಶ್ರೀ ಪಟ್ಟದ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು.
ಬಳಿಕ ನೆಲಮಂಗಲ ತಾಲ್ಲೂಕಿನ ಸದ್ಧರ್ಮ ಸಿಂಹಾಸನ ಸಂಸ್ಥಾನ ಶ್ರೀ ಹೊನ್ನಮ್ಮಗವಿ ಮಠ ಶಿವಗಂಗೆ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜ್ಯ ಶ್ರೀ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಗಳ ಆಶೀರ್ವಾದ, ನೆಲಮಂಒಂದು ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ನಾನು ಕೋವಿಡ್ ಸಮಯದಲ್ಲಿ ತಪ್ಪಾಗಿದ್ದಿದ್ದರೆ ಕ್ರಮ ಕೈಗೊಳ್ಳಬೇಕಿತ್ತು.ಗಲ ತಾಲ್ಲೂಕಿನ ಶ್ರೀ ಸೂರ್ಯಸಿಂಹಾಸನ ಕಂಬಾಳು ಸಂಸ್ಥಾನ ಮಠಕ್ಕೆ ಭೇಟಿ ನೀಡಿ ಪೂಜ್ಯ ಶ್ರೀ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದ, ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠಕ್ಕೆ ಭೇಟಿ ನೀಡಿ ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು.