ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಕರ್ನಾಟಕ ಲೋಕಾಯುಕ್ತ ನಡೆಸುತ್ತಿರುವ ತನಿಖೆಗೆ ತಡೆ ನೀಡುವುದಕ್ಕೆ ಸುಪ್ರೀಂಕೋರ್ಟ್ ನಿರಾಕರಿಸಿದೆ.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದ್ದನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಉಜ್ವಲ್ ಭುಯಾನ್ ಅವರ ಪೀಠದಲ್ಲಿ ನಡೆಯಿತು.
ಇವತ್ತು ವಿಚಾರಣೆಯ ಕೊನೆಯ ಹಂತದಲ್ಲಿ ಸಿಬಿಐ ಪರ ಹಾಜರಾಗಿದ್ದ ವಕೀಲರು ಮಧ್ಯಂತರ ಆದೇಶ ನೀಡುವಂತೆ ಪೀಠವನ್ನು ಕೋರಿದರು. ಆಗ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಯಾವ ರೀತಿಯ ಆದೇಶ ಹೊರಡಿಸಬೇಕು ಎಂದು ಬಯಸುತ್ತಿದ್ದೀರಿ ಎಂದು ಸಿಬಿಐ ಪರ ವಕೀಲರನ್ನು ಕೇಳಿದರು.
ಆಗ ಯತ್ನಾಳ್ ಪರ ಹಾಜರಾಗಿದ್ದ ವಕೀಲ ಕೆ ಪರಮೇಶ್ವರ್ ಅವರು, ʻಸಿಬಿಐನಿಂದ ತನಿಖೆಯನ್ನು ಹಿಂಪಡೆದು ಅನುಚಿತವಾಗಿ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ. ಇದು ವೇಳೆ ಲೋಕಾಯುಕ್ತ ಮುಕ್ತಾಯ ವರದಿ ಸಲ್ಲಿಸಿದರೆ ʻಡಿ ಕೆ ಶಿವಕುಮಾರ್ ಸಂಪುಟ ಸಚಿವರಾಗಿರುವ ಕಾರಣ ಸಲ್ಲಿಸುವ ಸಾಧ್ಯತೆಯೇ ಹೆಚ್ಚಿದ್ದು ಎಲ್ಲ ಪ್ರಯತ್ನಗಳು ನಿಷ್ಫಲವಾಗಲಿದೆʼ ಎಂದು ಹೇಳಿದರು.
ʻನಾವು ಒಂದು ಪ್ರಕ್ರಿಯೆನ್ನು ಅಮಾನ್ಯಗೊಳಿಸಿ ಇನ್ನೊಂದು ಪ್ರಕ್ರಿಯೆಯನ್ನು ಮುಂದುವರಿಸುವಂತೆ ಆದೇಶಿಸದಷ್ಟು ಅಸಮರ್ಥರೇ..? ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಮರು ಪ್ರಶ್ನೆ ಹಾಕಿದರು. ಈ ಮೂಲಕ ಲೋಕಾಯುಕ್ತ ತನಿಖೆಗೆ ತಡೆ ನೀಡುವುದಕ್ಕೆ ಸುಪ್ರೀಂಕೋರ್ಟ್ ಒಪ್ಪಿಕೊಳ್ಳಲಿಲ್ಲ. ಮುಂದಿನ ವಿಚಾರಣೆಯನ್ನು ಜನವರಿ 22ಕ್ಕೆ ಮುಂದೂಡಲಾಗಿದೆ.
ಜನವರಿ 22ರೊಳಗೆ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದ ಸಂಬಂಧ ಪ್ರಮಾಣಪತ್ರ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ.
ADVERTISEMENT
ADVERTISEMENT