ಮೂರು ತಿಂಗಳ ಹಿಂದೆಯಷ್ಟೇ ಗೆದ್ದಿದ್ದ ಪಶ್ಚಿಮ ಬಂಗಾಳದ (West Bengal Congress) ಏಕೈಕ ಕಾಂಗ್ರೆಸ್ ಶಾಸಕ ಆಡಳಿತರೂಢ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ಸಾಗರ್ದಿಘಿ (Sagardighi Assembly) ವಿಧಾನಸಭಾ ಕ್ಷೇತ್ರದ ಶಾಸಕ, ಉದ್ಯಮಿ ಬೆರಾನ್ ಬಿಸ್ವಾಸ್ (Bayron Biswas) ಅವರು ಇವತ್ತು ತೃಣಮೂಲ ಕಾಂಗ್ರೆಸ್ಗೆ (TMC) ಸೇರ್ಪಡೆಯಾಗಿದ್ದಾರೆ. ಈ ಮೂಲಕ ವಿಧಾನಸಭೆಯಲ್ಲಿ ಮತ್ತೆ ಕಾಂಗ್ರೆಸ್ನ ಒಬ್ಬರೇ ಒಬ್ಬ ಶಾಸಕರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಅವರ ಸಂಬಂಧಿಯೂ ಆಗಿರುವ ಲೋಕಸಭಾ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಬೈರೂನ್ ಬಿಸ್ವಾಸ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಅಭಿಷೇಕ್ ಬ್ಯಾನರ್ಜಿ (Abhishek Banerjee) ನೇತೃತ್ವದಲ್ಲಿ ಸಾಗುತ್ತಿರುವ ಜನಸಹೋಯಗಯಾತ್ರೆ ವೇಳೆ ಪಕ್ಷಕ್ಕೆ ಸೇರ್ಪಡೆಯಾದರು.
ಇದೇ ವರ್ಷ ಮಾರ್ಚ್ 2ರಂದು ಪ್ರಕಟವಾಗಿದ್ದ ವಿಧಾನಸಭಾ ಉಪ ಚುನಾವಣೆ ಫಲಿತಾಂಶದಲ್ಲಿ ಮುರ್ಷಿದಾಬಾದ್ ಜಿಲ್ಲೆಯ ಸಾಗರ್ದಿಘಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬೈರೂನ್ ಬಿಸ್ವಾಸ್ 22,986 ಮತಗಳಿಂದ ಟಿಎಂಸಿ ಅಭ್ಯರ್ಥಿ ದೇಬಾಸಿಶ್ ಬ್ಯಾನರ್ಜಿ ಅವರನ್ನು ಸೋಲಿಸಿದ್ದರು.
50 ವರ್ಷಗಳ ಬಳಿಕ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಈ ಕ್ಷೇತ್ರವನ್ನು ಗೆದ್ದುಕೊಂಡಿತ್ತು. ಈ ಉಪ ಚುನಾವಣಾ ಫಲಿತಾಂಶ ಪಶ್ಚಿಮ ಬಂಗಾಳದಲ್ಲಿ ಬದಲಾಗುತ್ತಿರುವ ರಾಜಕೀಯ ಚಿತ್ರಣದ ಸುಳಿವು ಎಂದೇ ಭಾವಿಸಲಾಗಿತ್ತು.
ಮಮತಾ ಬ್ಯಾನರ್ಜಿ ಅವರ ತಂತ್ರಗಾರಿಕೆ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ವಿರುದ್ಧವಾಗಿ ಲೋಕಸಭಾ ಚುನಾವಣೆಯಲ್ಲಿ ಒಕ್ಕೂಟ ರಚಿಸಿಕೊಳ್ಳುವ ವಿಪಕ್ಷಗಳ ಪ್ರಯತ್ನಕ್ಕೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ.
ADVERTISEMENT
ADVERTISEMENT