ಅನೇಕರಿಗೆ ಸಂಜೆಯ ಕಾಫಿ ಟೀ ಸಮಯದಲ್ಲಿ ಏನಾದರೂ ರುಚಿಕರವಾದದ್ದು ತಿನ್ನಲು ಇರಲೇಬೇಕು. ಅದಕ್ಕಾಗಿ ಹೆಚ್ಚಿನವರು ಮನೆಯಲ್ಲಿ ಪಕೋಡಾ, ಬೋಂಡಾ, ಬಜ್ಜಿ ಹೀಗೆ ಹಲವು ಬಗೆಯ ತಿನಿಸುಗಳನ್ನು ತಯಾರಿಸುತ್ತಾರೆ. ಪ್ರತಿದಿನ ಈ ರೀತಿಯ ಎಣ್ಣೆಯಲ್ಲಿ ಕರಿದ ಆಹಾರಗಳನ್ನು ತಿನ್ನುವುದು ಅಷ್ಟೊಂದು ಒಳ್ಳೆದಲ್ಲ. ಸಂಜೆಯ ತಿಂಡಿಯ ಆರೋಗ್ಯಕರ ಆವೃತ್ತಿಯನ್ನು ನೀವು ಹುಡುಕುತಿದ್ದರೆ, ಖಂಡಿತವಾಗಿಯೂ ನೀವು ಈ ಸೋಯಾ ಕಬಾಬ್ ರೆಸಿಪಿಯನ್ನು ತಯಾರಿಸಲೇಬೇಕು. ಪ್ರೋಟೀನ್ನ ಶಕ್ತಿಕೇಂದ್ರವಾಗಿರುವ ಸೋಯಾ ಚಂಕ್ಸ್ ನಮ್ಮ ದೇಹದಲ್ಲಿ ಸ್ನಾಯುಗಳನ್ನು ಬಲಗೊಳಿಸುತ್ತವೆ. ಅಲ್ಲದೆ ಫೈಬರ್, ಕ್ಯಾಲ್ಸಿಯಂ, ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್ ಗಳು, ಖನಿಜಗಳು ಮತ್ತು ಪ್ರೋಟೀನ್ಗಳಲ್ಲಿ ಸಮೃದ್ಧವಾಗಿರುವ ಸೋಯಾ ಚಂಕ್ಸ್ ತೂಕ ಇಳಿಕೆಗೂ ಕೂಡಾ ಸಹಾಯಕವಾಗಿದೆ. ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಸೋಯಾ ಚಂಕ್ಸ್ನಿಂದ ಬಿರಿಯಾನಿ, ಪಲಾವ್ ಮಾತ್ರವಲ್ಲದೆ ಕಬಾಬ್ ಕೂಡ ಮಾಡಬಹುದು. ಇದು ತಿನ್ನಲು ರುಚಿಕರ ಮಾತ್ರವಲ್ಲದೆ, ಆರೋಗ್ಯಕ್ಕೂ ಒಳ್ಳೆಯದು. ಸುಲಭವಾಗಿ ತಯಾರಿಸಬಹುದಾದ ಸೋಯಾ ಕಬಾಬ್ ರೆಸಿಪಿ ಮಾಹಿತಿ ಇಲ್ಲಿದೆ.
ಸೋಯಾ ಕಬಾಬ್ ಮಾಡಲು ಬೇಕಾಗುವ ಸಾಮಾಗ್ರಿಗಳು:
- ಸೋಯಾ 100 ಗ್ರಾಂ
- 1 ಸಣ್ಣದಾಗಿ ಹೆಚ್ಚಿದ ಈರುಳ್ಳಿ
- 2 ಹಸಿ ಮೆಣಸಿನಕಾಯಿ
- ಅಚ್ಚಖಾರದ ಪುಡಿ
- ಧನಿಯಾ ಪುಡಿ
- ಗರಂ ಮಸಾಲೆ
- ಜೀರಿಗೆ ಪುಡಿ
- ಅರಶಿನ
- ಆಮ್ ಚೂರ್ (ಮಾವಿನ ಪುಡಿ) ಅಥವಾ ಚಾಟ್ ಮಸಾಲಾ
- 3 ಟೀ ಚಮಚ ಬೇಳೆಹಿಟ್ಟು
- 1 ಕಪ್ ಬೇಳೆ
- ಕರಿಮೆಣಸಿನ ಪುಡಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕೊತ್ತಂಬರಿ ಸೊಪ್ಪು
- ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ:
ಮೊದಲು ಸೋಯಾ ತುಂಡುಗಳನ್ನು ಬಿಸಿ ನೀರಿನಲ್ಲಿ ನೆನೆಸಿ. ಜೊತೆಗೆ ಬೇಳೆಯನ್ನು ಸಹ ಸುಮಾರು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
ಬಳಿಕ ಸೋಯಾ ಚಂಕ್ಸ್ಗಳನ್ನು ನೀರಿನಿಂದ ತೆಗೆದು ಚೆನ್ನಾಗಿ ಹಿಂಡಿ ಅದನ್ನು ಪಕ್ಕಕ್ಕೆ ಇಡಿ.
ನಂತರ ಗ್ರೈಂಡರ್ ಅಥವಾ ಮಿಕ್ಸಿ ಜಾರ್ನಲ್ಲಿ ಸೋಯಾ ಮತ್ತು ನೆನೆಸಿದ ಬೇಳೆಯನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನುಣ್ಣಗೆ ರುಬ್ಬಿಕೊಂಡ ಬಳಿಕ ಆ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ.
ಈಗ ಆ ಮಿಶ್ರಣಕ್ಕೆ ಸ್ವಲ್ಪ ಬೇಳೆ ಹಿಟ್ಟು, ಸಣ್ಣಗೆ ಹೆಚ್ಚಿದ ಈರುಳ್ಳಿ, ಕತ್ತರಿಸಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ, ಧನಿಯಾ ಪುಡಿ, ಆಮ್ ಚೂರ್ ಪುಡಿ, ಗರಂ ಮಸಾಲೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅಚ್ಚಖಾರದ ಪುಡಿ ಈ ಎಲ್ಲಾ ಮಸಾಲೆಗಳನ್ನು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣಮಾಡಿಕೊಳ್ಳಿ.
ಕೊನೆಯಲ್ಲಿ ನಿಂಬೆ ಹಣ್ಣಿನ ರಸವನ್ನು ಕೂಡ ಹಿಂಡಬಹುದು. ಈಗ ಕಬಾಬ್ ಹಿಟ್ಟು ರೆಡಿಯಾಗಿದೆ. ಕೊನೆಯದಾಗಿ ಆ ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಅಥವಾ ಕಟ್ಲೇಟ್ ಆಕಾರದಲ್ಲಿ ಕಾಬಾಬ್ ತಯಾರಿಸಿ.
ಅನಂತರ ಅದನ್ನು ನೀವು ಬಾಣಲೆಯಲ್ಲಿ ಡೀಪ್ ಫ್ರೈ ಮಾಡಬಹುದು ಅಥವಾ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಬಾಬ್ ಕಂದು ಬಣ್ಣ ತಿರುಗುವವರೆಗೆ ಫ್ರೈ ಮಾಡಬಹುದು. ಈ ಖಾದ್ಯ ಪುದೀನಾ ಚಟ್ನಿ ಅಥವಾ ಟೊಮೆಟೊ ಸಾಸ್ನೊಂದಿಗೆ ತಿನ್ನಲು ಇನ್ನಷ್ಟು ರುಚಿಕರವಾಗಿರುತ್ತದೆ.