ಪ್ರೇಮ ವೈಫಲ್ಯದಿಂದ 21 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರಬೂರು ಗ್ರಾಮದ ಕೃಷಿ ಮಹಾವಿದ್ಯಾಲಯದ ಹಾಸ್ಟೆಲ್ನಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಬನ್ನಿಕುಪ್ಪೆ ಗ್ರಾಮದ ಪವಿತ್ರಾ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಬಿಎಸ್ಸಿ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದ ಪವಿತ್ರಾ, ಹಾಸ್ಟೆಲ್ನ ಕೊಠಡಿಯಲ್ಲಿ ರಾತ್ರಿ 11:30 ರ ಸುಮಾರಿಗೆ ನೇನುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪವಿತ್ರಾ ತನ್ನ ಸಾವಿನ ಬಗ್ಗೆ ಡೆತ್ ನೋಟ್ ಬರೆದಿಟ್ಟಿದ್ದಾಳೆ. ಹಾಗೆಯೇ, ತನ್ನ ಫೋನ್ನಲ್ಲಿ ವಿಡಿಯೋ ಸಹ ಮಾಡಿದ್ದಾಳೆ ಎಂದು ಹೇಳಲಾಗುತ್ತಿದೆ.
ಡೆತ್ನೋಟ್ ವಿವರ :
ಈಚೆಗಷ್ಟೇ ನನಗೆ ಅಪರಿಚಿತ ಯುವಕನ ಮೊಬೈಲ್ ನಂಬರ್ ಸಿಕ್ಕಿ ಆತನೊಂದಿಗೆ ಪರಿಚಯವಾಗಿ ಪ್ರೇಮವಾಗಿತ್ತು. ಆತ ಒಳ್ಳೆಯವನೆಂದು ಭಾವಿಸಿದ್ದೆ, ಆದ್ರೆ ಅವನು ಒಳ್ಳೆಯವನಲ್ಲ ಪರಿಚಯವಾದ ಕೆಲವೇ ದಿನಗಳಲ್ಲಿ ರೂಂ ಗೆ ಕರೆದಿದ್ದ. ನಂತರ ನಾನು ಆತನೊಂದಿಗೆ ಮಾತನಾಡುವುದನ್ನೇ ಬಿಟ್ಟಿದ್ದೆ. ಅದರೂ, ಅವನು ಮತ್ತೆ ಮತ್ತೆ ಫೋನ್ಕಾಲ್, ಮೆಸೇಜ್ ಮಾಡುತ್ತಿದ್ದ. ಮತ್ತೆ ಪ್ರೇಮ ಶುರುವಾಗಿ ಆತನೇ ಪ್ರಪಂಚ ಎಂಬಂತಾಗಿತ್ತು. ಈ ವಿಚಾರ ಯುವಕನ ಮನೆಯಲ್ಲಿ ಗೊತ್ತಾಗಿ ಅವನ ಅಕ್ಕ ನನಗೆ ಕರೆ ಮಾಡಿ, ಬೈದಿದ್ದರು. ಇದರಿಂದ ನಾವಿಬ್ಬರೂ ಬೇರೆಯಾಗೋಣ ಅಂತಾನೂ ತೀರ್ಮಾನ ಮಾಡಿದ್ದೀವಿ ಎಂದು ಯುವತಿ ಬರೆದಿದ್ದಾಳೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ಬರೆದಿಲ್ಲ.
ಪ್ರಕರಣ ದಾಖಲಿಸಿಕೊಂಡಿರುವ ಚಿಂತಾಮಣಿ ಗ್ರಾಮಾಂತರ ಪೊಲೀಸರು ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.