ಹಣದುಬ್ಬರದಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಗೃಹ ಬಳಕೆಯ ಎಲ್ಜಿಪಿ ಸಿಲಿಂಡರ್ಗಳಿಗೆ ಸಬ್ಸಿಡಿ ನೀಡಲ್ಲ ಎಂದು ಅಧಿಕೃತವಾಗಿ ಘೋಷಿಸಿದೆ. ಸಾಮಾನ್ಯ ಗ್ರಾಹಕರು ಮಾರ್ಕೆಟ್ ದರಕ್ಕೆ ಅಡುಗೆ ಅನಿಲವನ್ನು ಖರೀದಿ ಮಾಡಬೇಕಾಗುತ್ತದೆ.
ಕೋವಿಡ್ ಶುರುವಾದ ದಿನದಿಂದ ಎಲ್ಪಿಜಿ ವಿನಿಯೋಗದಾರರಿಗೆ ಸಬ್ಸಿಡಿ ನೀಡಿಲ್ಲ. ಇನ್ಮುಂದೆಯೂ ಕೂಡ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಇಂಧನ ಇಲಾಖೆ ಸ್ಪಷ್ಟಪಡಿಸಿದೆ. ಅಲ್ಲಿಗೆ, ಎರಡು ವರ್ಷದಿಂದ ಬಾಕಿ ಉಳಿಸಿಕೊಂಡಿದ್ದ LPG ಸಬ್ಸಿಡಿ ಹಣವನ್ನು ಆಗ ಕೊಡಬಹುದು.. ಈಗ ಕೊಡಬಹುದು ಎಂದು ಕಾದಿದ್ದ ಜನ ಸಾಮಾನ್ಯರಿಗೆ ತೀವ್ರ ನಿರಾಸೆ ಎದುರಾಗಿದೆ.
ಉಜ್ವಲ ಫಲಾನುಭವಿಗಳಿಗೆ ಮಾತ್ರ ಸಬ್ಸಿಡಿ
ಇನ್ನು ಮುಂದೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ಹೊಂದಿದವರಿಗೆ ಮಾತ್ರ ಸಬ್ಸಿಡಿ ನೀಡಲಾಗುತ್ತದೆ.
ಸದ್ಯ ಬೆಂಗಳೂರಿನಲ್ಲಿ 14 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆ 1006 ರೂಪಾಯಿ ಇದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ 200 ರೂಪಾಯಿ ಸಬ್ಸಿಡಿ ಸಿಗಲಿದೆ. 12 ಸಿಲಿಂಡರ್ವರೆಗೂ ಅವರು ಈ ಸಬ್ಸಿಡಿ ಪಡೆಯಲು ಅರ್ಹರಾಗಿರುತ್ತಾರೆ. ಈ ಸಬ್ಸಿಡಿ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ.
ದೇಶಾದ್ಯಂತ 30 ಕೋಟಿ ಎಲ್ಪಿಜಿ ಕನೆಕ್ಷನ್ ಇದ್ದು, ಇದ್ರಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳ ಸಂಖ್ಯೆ 9 ಕೋಟಿ.. ಅಂದ್ರೆ 21 ಕೋಟಿ ಮಂದಿಗೆ ಸಬ್ಸಿಡಿ ಸೌಲಭ್ಯ ಇಲ್ಲ ಎಂದೇ ಅರ್ಥ.
2010ರಲ್ಲಿ ಪೆಟ್ರೋಲ್ ಮೇಲಿನ ಸಬ್ಸಿಡಿ ರದ್ದು ಮಾಡಲಾಗಿತ್ತು. 2014ರಲ್ಲಿ ಡೀಸೆಲ್ ಮೇಲಿನ ಸಬ್ಸಿಡಿ ರದ್ದು ಮಾಡಲಾಗಿತ್ತು. ಎರಡು ವರ್ಷದ ಹಿಂದೆ ಸೀಮೆ ಎಣ್ಣೆಗೆ ನೀಡುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರ್ಕಾರದ ಸದ್ದಿಲ್ಲದೇ ರದ್ದು ಮಾಡಿತ್ತು. ಈಗ LPG ಸರದಿ.