ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಯ ಹಿಂದೆ ‘ಮಹಾನಾಯಕ’ನ ಕೈವಾಡವಿದೆ ಎಂದು ಹೇಳುವ ಮೂಲಕ ಪ್ರಸ್ತುತ ನಡೆಯುತ್ತಿರುವ ವಾದ ವಿವಾದಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ಮತ್ತೊಂದು ತಿರುವು ನೀಡಿದ್ದಾರೆ. ಸೋಮವಾರ 11 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಎಲ್ಲವನ್ನೂ ಬಹಿರಂಗ ಮಾಡುತ್ತೇನೆ ಎಂದು ಗುಡುಗಿದ್ದಾರೆ.
ಇಂದು ಮೃತ ಸಂತೋಷ್ ಪಾಟೀಲ್ ಕುಟುಂಬವನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿಯವರು, ಸಂತೋಷ್ ಪಾಟೀಲ್ ನನ್ನ ಹಳೆಯ ಕಾರ್ಯಕರ್ತ. ಈ ಕೇಸ್ ಹಿಂದೆಯೂ ಮಹಾನಾಯಕನಿದ್ದಾನೆ. ನನ್ನ ಸಿಡಿ ಕೇಸ್ನಲ್ಲಿದ್ದ ಮಹಾನಾಯಕನ ತಂಡ ಈ ಪ್ರಕರಣದಲ್ಲಿಯೂ ಇದೇ ಎಂದು ಹೊಸ ಬಾಂಬ್ ಹಾಕಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಹಾಗೂ ನನ್ನ ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಆಗ ಇವುಗಳ ಹಿಂದೆ ಯಾವ ಮಹಾನಾಯಕನಿದ್ದಾನೆ ಎಂಬುದು ತಿಳಿದುಬರುತ್ತದೆ. ನನ್ನ ಸಿಡಿ ಕೇಸ್ನಲ್ಲಿದ್ದ ತಂಡವೇ ಇಲ್ಲಿಯೂ ಇದೆ. ಆ ಹೆಸರು ಹೇಳುವುದು ಬೇಡ. ಹೈಕಮಾಂಡ್ ಒಪ್ಪಿಗೆ ನೀಡಿದರೆ, ಸೋಮವಾರ ಸುದ್ದಿಗೋಷ್ಠಿ ನಡೆಸುತ್ತೇನೆ. ನಾನು ಕಳೆದ ಒಂದು ವರ್ಷದಿಂದ ವಿನಾಕಾರಣ ಆರೋಪ ಎದರಿಸಿ ನೋವು ತಿಂದಿದ್ದೇನೆ. ಆದ್ದರಿಂದ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬೇಡ. ಕಾನೂನಿನ ಅನ್ವಯ ತನಿಖೆಯಾಗಲಿ. ತಪ್ಪಿದ್ದರೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.