ಕೇಂದ್ರ ಸರ್ಕಾರ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಪೆಟ್ರೋಲ್-ಡೀಸೆಲ್ ಮೇಲಿನ ವ್ಯಾಟ್ ನ್ನು ಕಡಿತಗೊಳಿಸಿದೆ.
ಪೆಟ್ರೋಲ್ ಮೇಲಿನ ವ್ಯಾಟ್ ನ್ನು ಪ್ರತಿ ಲೀಟರ್ ಗೆ 2.08 ರೂಪಾಯಿ ಡೀಸೆಲ್ ಮೇಲಿನ ವ್ಯಾಟ್ ನ್ನು ಪ್ರತಿ ಲೀಟರ್ ಗೆ 1.44 ರೂಪಾಯಿಗಳನ್ನು ಕಡಿತಗೊಳಿಸಲಾಗಿದೆ.
ಸರ್ಕಾರದಿಂದ ಈ ಬಗ್ಗೆ ಅಧಿಕೃತ ಪ್ರಕಟಣೆ ಬಂದಿದ್ದು, ಇದಕ್ಕಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 2,500 ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ತಿಳಿಸಿದೆ.
ವ್ಯಾಟ್ ಕಡಿಮೆಗೊಳಿಸಿದ ಬಳಿಕ ಪೆಟ್ರೋಲ್ ನಿಂದ ಬರುವ ಮಾಸಿಕ ಆದಾಯ 80 ಕೋಟಿಯಷ್ಟು ಹಾಗೂ ಡೀಸೆಲ್ ನಿಂದ ಬರುವ ಆದಾಯದಲ್ಲಿ 125 ಕೋಟಿ ರೂಪಾಯಿಗಳಷ್ಟು ಕಡಿಮೆಯಾಗಲಿದೆ ಎಂದು ಹೇಳಿದೆ.
ಏರುತ್ತಿರುವ ಹಣದುಬ್ಬರದ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಶನಿವಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 8 ರೂಪಾಯಿ ಹಾಗೂ ಡೀಸೆಲ್ ಗೆ 6 ರೂಪಾಯಿ ಕಡಿತಗೊಳಿಸಿತ್ತು.
ಆ ಬೆನ್ನಲ್ಲೇ, ರಾಜಸ್ಥಾನ ಹಾಗೂ ಕೇರಳ ಸರ್ಕಾರಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಬೆಲೆ ಕಡಿತ ಮಾಡಿದ್ದವು. ಇದೀಗ ಮಹಾರಾಷ್ಟ್ರ ಸರ್ಕಾರವು ಬೆಲೆ ಕಡಿತ ಮಾಡಿದೆ. ಸಿಎಂ ಬೊಮ್ಮಾಯಿಯವರು ರಾಜ್ಯದಲ್ಲಿ ಬೆಲೆ ಕಡಿತ ಮಾಡುವ ಬಗ್ಗೆ ಯೋಚಿಸಲಾಗುವುದು ಎಂದು ಹೇಳಿದ್ದಾರೆ.