ವೀಕೆಂಡ್ ಬಂತಂದ್ರೆ ಸಾಕು ಎಲ್ಲರೂ ರಿಲಾಕ್ಸ್ ಮೂಡ್ನಲ್ಲಿರುತ್ತಾರೆ. ಅದರಲ್ಲೂ ಈ ಟೈಂನಲ್ಲಿ ನಾನ್ವೆಜ್ ತಿನ್ನುವುದರಲ್ಲಿ ಸಿಗುವ ಮಜಾನೇ ಬೇರೆ. ಸದ್ಯ ಈ ಸಂಡೇ ನೀವು ಫ್ರೀ ಆಗಿದ್ದರೆ ಮನೆಯಲ್ಲಿಯೇ ಹೊಸ ನಾನ್ವೆಜ್ ರೆಸಿಪಿ ಟ್ರೈ ಮಾಡಿ. ಸಾಕಷ್ಟು ಮಂದಿಗೆ ಮಟನ್ ಎಂದರೆ ಇಷ್ಟ. ಮತ್ತಷ್ಟು ಮಂದಿಗೆ ಚಿಕನ್ ಅಂದರೆ ಇಷ್ಟ. ಆದರೀಗ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಹೆಚ್ಚಾಗಿ ಜನ ಚೂಸ್ ಮಾಡುವುದೇ ಚಿಕನ್. ಹಾಗಾಗಿ ನಾವಿಂದು ಮನೆಮಂದಿಯೆಲ್ಲರಿಗೂ ಇಷ್ಟವಾಗುವಂತಹ ಮಂಗಳೂರು ಚಿಕನ್ ಸುಕ್ಕ ಮಾಡುವುದು ಹೇಗೆ ಎಂದು ಹೇಳಿಕೊಡುತ್ತಿದ್ದೇವೆ ನೋಡಿ.
ಬೇಕಾಗುವ ಪದಾರ್ಥಗಳು:
ತುಪ್ಪ – 3 ಟೀಸ್ಪೂನ್
ಒಣ ಕೆಂಪು ಮೆಣಸು – 20
ಕೊತ್ತಂಬರಿ – 5 ಟೀಸ್ಪೂನ್
ಅರಿಶಿನ – 1 ಟೀಸ್ಪೂನ್
ಹುಣಿಸೆ ಹಣ್ಣು – ಸ್ವಲ್ಪ
ಹೆಚ್ಚಿದ ಈರುಳ್ಳಿ – 1
ಮೆಂತ್ಯ – ಕಾಲು ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ಲವಂಗ – 2
ಏಲಕ್ಕಿ – 1
ಬೆಳ್ಳುಳ್ಳಿ – 10
ಕರಿಬೇವಿನ ಸೊಪ್ಪು – ಕೆಲವು
ತೆಂಗಿನ ತುರಿ – ಅರ್ಧ ಕಪ್
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಟೊಮೆಟೊ – 1
ಚಿಕನ್ ತುಂಡುಗಳು – 1 ಕೆಜಿ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
* ಮೊದಲಿಗೆ ಒಂದು ಪ್ಯಾನ್ ತೆಗೆದುಕೊಂಡು, ಅದಕ್ಕೆ 1 ಟೀಸ್ಪೂನ್ ತುಪ್ಪ ಹಾಕಿ ಬಿಸಿಯಾದ ಬಳಿಕ ಕೆಂಪು ಮೆಣಸಿನಕಾಯಿ ಹಾಗೂ ಕೊತ್ತಂಬರಿ ಹಾಕಿ ಹುರಿದುಕೊಳ್ಳಿ.
* ಹುರಿದ ಪದಾರ್ಥಗಳು ತಣ್ಣಗಾದ ಬಳಿಕ ಅದನ್ನು ಮಿಕ್ಸರ್ ಜಾರ್ಗೆ ಹಾಕಿ, ಅರಿಶಿನ ಮತ್ತು ಹುಣಸೆ ಹಣ್ಣನ್ನು ಸೇರಿಸಿ ರುಬ್ಬಿಕೊಳ್ಳಿ.
* ಈಗ ಒಂದು ಪ್ಯಾನ್ನಲ್ಲಿ 1 ಟೀಸ್ಪೂನ್ ತುಪ್ಪ ಬಿಸಿ ಮಾಡಿ, ಅದಕ್ಕೆ ಈರುಳ್ಳಿ ಹಾಕಿ ಸ್ವಲ್ಪ ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಿ.
* ಈಗ ಮೆಂತ್ಯ, ಜೀರಿಗೆ, ಲವಂಗ ಹಾಗೂ ಏಲಕ್ಕಿ ಸೇರಿಸಿ ಸ್ವಲ್ಪ ಹುರಿಯಿರಿ.
* ಬಳಿಕ ಬೆಳ್ಳುಳ್ಳಿ ಹಾಗೂ ಕರಿಬೇವಿನ ಸೊಪ್ಪು ಸೇರಿಸಿ ಫ್ರೈ ಮಾಡಿ. ಬಳಿಕ ಉರಿ ಆಫ್ ಮಾಡಿ ಆರಲು ಬಿಡಿ.
* ಈಗ ಹುರಿದು ತಣ್ಣಗಾಗಿಸಿದ ಪದಾರ್ಥಗಳನ್ನು ಮಿಕ್ಸರ್ ಜಾರ್ಗೆ ಹಾಕಿ ರುಬ್ಬಿಕೊಳ್ಳಿ.
* ಈಗ ಪ್ಯಾನ್ನಲ್ಲಿ ತೆಂಗಿನ ತುರಿ ಹಾಕಿಕೊಂಡು ಸ್ವಲ್ಪ ಹುರಿದುಕೊಳ್ಳಿ. ಬಳಿಕ ಪಕ್ಕಕ್ಕಿಡಿ.
* ಒಂದು ಕಡಾಯಿ ತೆಗೆದುಕೊಂಡು, ಅದಕ್ಕೆ 1 ಟೀಸ್ಪೂನ್ ತುಪ್ಪ ಹಾಕಿ, ಈರುಳ್ಳಿ ಹಾಗೂ ಟೊಮೆಟೊವನ್ನು ಹುರಿದುಕೊಳ್ಳಿ. ಬಳಿಕ ಸ್ವಲ್ಪ ಕರಿಬೇವಿನ ಸೊಪ್ಪು ಸೇರಿಸಿ ಸ್ವಲ್ಪ ಕೈಯಾಡಿಸಿ.
* ಈಗ ಅದಕ್ಕೆ ಚಿಕನ್ ತುಂಡುಗಳನ್ನು ಹಾಕಿ ಕೈಯಾಡಿಸುತ್ತಾ ಬೇಯಿಸಿಕೊಳ್ಳಿ.
* ಈಗ ರುಬ್ಬಿದ ಕೆಂಪುಮೆಣಸು ಹಾಗೂ ಕೊತ್ತಂಬರಿಯ ಮಿಶ್ರಣವನ್ನು ಸೇರಿಸಿ, ಚಿಕನ್ ಬೇಯಲು ಬೇಕಾಗುವಷ್ಟು ನೀರು ಸೇರಿಸಿ, ಉಪ್ಪು ಹಾಕಿ ಮಿಶ್ರಣ ಮಾಡಿ.
* ಈಗ ಕಡಾಯಿಗೆ ಮುಚ್ಚಳ ಹಾಕಿ ಬೇಯಿಸಿಕೊಳ್ಳಿ.
* ಚಿಕನ್ ಮುಕ್ಕಾಲು ಭಾಗದಷ್ಟು ಬೆಂದ ಬಳಿಕ ರುಬ್ಬಿಟ್ಟುಕೊಂಡಿದ್ದ ಮಸಾಲೆ ಪದಾರ್ಥಗಳನ್ನು ಸೇರಿಸಿ ಮಿಶ್ರಣ ಮಾಡಿ, ಚೆನ್ನಾಗಿ ಬೇಯಿಸಿ.
* ಈಗ ಹುರಿದಿಟ್ಟುಕೊಂಡಿದ್ದ ತೆಂಗಿನ ತುರಿಯನ್ನು ಸೇರಿಸಿ, ಮಿಶ್ರಣ ಮಾಡಿ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ.
* ನೀರಿನಂಶವೆಲ್ಲಾ ಆವಿಯಾದ ಬಳಿಕ ಉರಿಯನ್ನು ಆಫ್ ಮಾಡಿ.
* ಇದೀಗ ಚಿಕನ್ ಸುಕ್ಕ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ನೀರುದೋಸೆ, ಅಕ್ಕಿ ರೊಟ್ಟಿಯೊಂದಿಗೆ ಇದು ಸೂಪರ್ ಎನಿಸುತ್ತದೆ.