ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿನ ಮಲದಕಲ್ ಗ್ರಾಮದ ಗೆಳೆಯರ ಬಳಗ ಹಸಿರೀಕರಣದ ಸದುದ್ದೇಶದಿಂದ ದೇವದುರ್ಗ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಮಲದಕಲ್ ಗ್ರಾಮದ ಗೆಳೆಯರ ಬಳಗ ದೇವದುರ್ಗ ತಾಲೂಕಿನ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳಲ್ಲಿ ಸಸಿಗಳನ್ನು ನೆಡಲಾಗಿದೆ. ಅರಣ್ಯ ಇಲಾಖೆಯ ಸಹಕಾರದಿಂದ ಪ್ರೊ.ಎಚ್.ಎಲ್.ಮಾರುತಿ ಕುಮಾರ್ ನಾಯಕ್ ನೇತೃತ್ವದ ತಂಡ ಈಗಾಗಲೇ ಗಬ್ಬೂರು, ಸುಂಕೇಶ್ವರಹಾಳ ಮತ್ತು ಗೂಗಲ್ ಸಿ.ಆರ್.ಪಿ. ವಲಯದಲ್ಲಿನ ಸುಮಾರು 30 ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳು ಹಾಗೂ 5 ಶಾಲೆಯಲ್ಲಿ ಸಸಿಗಳನ್ನು ನೆಟ್ಟಿದ್ದಾರೆ.
ಜೂನ್ 5 ರಂದು ಪರಿಸರ ದಿನಾಚರಣೆಯ ಪ್ರಯುಕ್ತ ಸರ್ಕಾರಿ ಶಾಲೆಗಳಲ್ಲಿ ಸಸಿ ನೆಡುವ ಹಾಗೂ ವಿತರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಈ ಕಾರ್ಯಕ್ರಮವನ್ನು ದೇವದುರ್ಗ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶ್ರೀ ನಿಜಾನಂದ ಯೋಗಾಶ್ರಮ ಮಲದಕಲ್ ಶ್ರೀ ಗುರುಬಸವ ರಾಜಗುರುಗಳು ಉದ್ಘಾಟನೆ ಮಾಡಿ ಮಲದಕಲ್ ಗೆಳೆಯರ ಬಳಗಕ್ಕೆ ಶುಭ ಹಾರೈಸಿದರು.
ವೃತ್ತಿಯಿಂದ ಉಪನ್ಯಾಸಕರಾಗಿರುವ ಪ್ರೊ.ಎಚ್.ಎಲ್.ಮಾರುತಿ ಕುಮಾರ್ ನಾಯಕ್ ಅವರು ತಮ್ಮ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಇವರೇ ಮಲದಕಲ್ ಗೆಳೆಯರ ಬಳಗದ ನೇತೃತ್ವ ವಹಿಸಿಕೊಂಡಿದ್ದಾರೆ. ಈ ತಂಡ ಸುಮಾರು ಒಂದು ವಾರಗಳ ಕಾಲ ಸುಂಕೇಶ್ವರಹಾಳ, ಗಬ್ಬೂರು, ಗೂಗಲ್, ಸಿಆರ್ಪಿ ವಲಯಗಳಲ್ಲಿ ಸುಮಾರು 35ಕ್ಕೂ ಸರ್ಕಾರಿ ಶಾಲೆಗಳಿಗೆ ಹಾಗೂ ಗ್ರಂಥಾಲಯಗಳಿಗೆ ಸಸಿ ನೆಡುವ ಹಾಗೂ ವಿತರಣೆ ಕಾರ್ಯಕ್ರಮ ಮಾಡಿದೆ.
ಪ್ರತಿ ಶಾಲೆಗಳಿಗೆ ಹಾಗೂ ಗ್ರಂಥಾಲಯಗಳಿಗೆ ಗೆಳೆಯರ ಬಳಗ ಮಲದಕಲ್ ಗೆಳೆಯರ ತಂಡದ ಸದಸ್ಯರಾದ ಶಿವಾನಂದ ನಾಯಕ್ ಬಾಲಯ್ಯ, ನಾಯಕ್ ಎಂಡಿ ಭಾವಸಲಿ, B ಅಜ್ಮೀರ್, ಸಂಗಣ್ಣ ಬೋವಿ, B ಚನ್ನಬಸವ, B ಶಿವರಾಜ್ ಗೋವಿಂದ ತಿಪ್ಪಲದಿನ್ನಿ, ಬಾಬು ನದಾಫ್ ಇತರರು ವಾಹನಗಳ ಮುಖಾಂತರ ಸಸಿ ತಲುಪಿಸಿ ನೆಡುವ ಕೆಲಸ ಮಾಡಿದ್ದಾರೆ. ಬೇವು, ಬಾದಾಮಿ ಸೇರಿದಂತೆ ವಿವಿಧ ಬಗೆಗಳ ಸಸಿಗಳನ್ನು ನೆಡಲಾಗಿದೆ.
ದೇವದುರ್ಗ ತಾಲೂಕಿನ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಹಸಿರೀಕರಣ ಮಾಡುವ ಉದ್ದೇಶವನ್ನು ಈ ತಂಡ ಹೊಂದಿದೆ.