ಕೇರಳದ ಅಲಪ್ಪುಳಂ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಹಾಡು ಹಾಡುತ್ತಿರುವಾಗಲೇ ಕುಸಿದು ಬಿದ್ದು ಮಲಯಾಳಂನ ಜನಪ್ರಿಯ ಹಿನ್ನೆಲೆ ಗಾಯಕ ಎಡವ ಬಶೀರ್(78) ನಿಧನರಾಗಿದ್ದಾರೆ.
ಜನಪ್ರಿಯ ಸಂಗೀತ ತಂಡವಾದ ಭೀಮಾಸ್ ಬ್ಲೂ ಡೈಮಂಡ್ ಆರ್ಕೆಸ್ಟ್ರಾದ 50 ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಹಾಡು ಹಾಡುತ್ತಿರುವಾಗ ಎಡವ ಬಶೀರ್ ಕುಸಿದುಬಿದ್ದ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಕೇರಳದ ಸಂಗೀತ ಪ್ರೇಮಿಗಳು, ರಾಜಕೀಯ ಮುಖಂಡರು ಮತ್ತು ಚಿತ್ರರಂಗದವರು ಸಂತಾಪ ಸೂಚಿಸಿದ್ದಾರೆ.
ಎಡವ ಬಶೀರ್ ವೇದಿಕೆಯ ಮೇಲೆ ಹಿಂದಿಯ ಮನೋ ಹೋ ತುಮ್ ಗೀತೆಯನ್ನು ಹಾಡುತ್ತಿದ್ದರು. ಹಾಡಿನ ಕೊನೆಯಲ್ಲಿ ಅವರ ವೇದಿಕೆಯ ಮೇಲೆಯೇ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಟ್ವೀಟ್ ಮಾಡಿ ಸಂತಾಪ ಸೂಚಿಸಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ‘ಗಾನಮೇಳ’ವನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಡವ ಬಶೀರ್ ಅವರ ನಿಧನವು ಸಂಗೀತ ಲೋಕಕ್ಕೆ ಅಪಾರ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಗಾಯಕ ಎಡವ ಬಶೀರ್ ಅವರು ಅನೇಕ ಚಲನಚಿತ್ರ ಗೀತೆಗಳನ್ನು ಹಾಡಿದ್ದರು. ಆದರೆ, ಅವರು ದೇವಾಲಯಗಳಲ್ಲಿ ತಮ್ಮ ವೇದಿಕೆಯ ಪ್ರದರ್ಶನಕ್ಕೆ ಹೆಚ್ಚು ಪ್ರಖ್ಯಾತಿ ಗಳಿಸಿದ್ದರು. ಅವರ ಅಂತ್ಯಕ್ರಿಯೆ ಭಾನುವಾರ ಕಡಪ್ಪಕಡ ಜುಮಾ ಮಸೀದಿಯಲ್ಲಿ ನಡೆದಿದೆ.