ಒಕ್ಕೂಟ ವ್ಯವಸ್ಥೆ ಮೇಲೆ ಬಿಜೆಪಿ ದಾಳಿ ಮಾಡುತ್ತಿದೆ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳ ಸಿಎಂ ಮತ್ತು ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಬಿಜೆಪಿಯೇತರ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷಗಳ ನಾಯಕರಿಗೆ ಪತ್ರ ಬರೆದಿದ್ದಾರೆ. `ವಿರೋಧ ಪಕ್ಷವಾಗಿ ಸರ್ಕಾರವನ್ನು ಅದರ ಕ್ರಿಯೆಗಳಿಗೆ ಹೊಣೆಗಾರಿಕೆ ಮಾಡುವುದು ನಮ್ಮ ಕರ್ತವ್ಯ ಮತ್ತು ಪ್ರತಿರೋಧಿ ದನಿಯನ್ನು ಹತ್ತಿಕ್ಕುವ ಪ್ರಯತ್ನವನ್ನು ಪ್ರತಿರೋಧಿಸಬೇಕು’ ಎಂದು ಪತ್ರದಲ್ಲಿ ಹೇಳಿದ್ದಾರೆ.
ಐದು ರಾಜ್ಯಗಳಲ್ಲಿ ನಾಲ್ಕರಲ್ಲಿ ಬಿಜೆಪಿ ಗೆದ್ದ ಬಳಿಕ ಮತ್ತು ಪಶ್ಚಿಮ ಬಂಗಾಳದ ಬಿರ್ಭುಮ್ನಲ್ಲಿ ರಾಜಕೀಯ ಹಿಂಸಾಚಾರದಲ್ಲಿ 8 ಮಂದಿ ಸಜೀವವಾಗಿ ಕೊಲೆಯಾದ ಪ್ರಕರಣದ ಸಿಬಿಐ ತನಿಖೆಗೆ ಕೋಲ್ಕತ್ತಾ ಹೈಕೋರ್ಟ್ ಆದೇಶ ಕೊಟ್ಟ ಬಳಿಕ ಮಮತಾ ಬ್ಯಾನರ್ಜಿ ಬರೆಯುತ್ತಿರುವ ಮೊದಲ ಪತ್ರ ಇದಾಗಿದ್ದು, ಸಾಕಷ್ಟು ಮಹತ್ವ ಪಡೆದಿದೆ.
`ಆಡಳಿತ ಬಿಜೆಪಿಯಿಂದ ದೇಶದ ಸಾಂಸ್ಥಿಕ ಪ್ರಜಾಪ್ರಭುತ್ವದ ಮೇಲಾಗುತ್ತಿರುವ ದಾಳಿಗಳ ಬಗ್ಗೆ ತೀವ್ರ ಕಳವಳಗೊಂಡು ಈ ಪತ್ರವನ್ನು ಬರೆಯುತ್ತಿದ್ದೇನೆ. ಇಡೀ ದೇಶದಲ್ಲಿ ದ್ವೇಷಕ್ಕಾಗಿ ರಾಜಕೀಯ ವಿರೋಧಿಗಳನ್ನು ಟಾರ್ಗೆಟ್ ಮಾಡಲು ಮೂಲೆಗುಂಪು ಮಾಡಲು ಮತ್ತು ಕಿರುಕುಳ ಕೊಡಲು ಕೇಂದ್ರ ಸಂಸ್ಥೆಗಳಾದ ಇಡಿ, ಸಿಬಿಐ, ಕೇಂದ್ರ ವಿಚಕ್ಷಣಾ ಆಯೋಗ ಮತ್ತು ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಳ್ಳಲಾಗುತ್ತಿದೆ.
`ಇತ್ತೀಚೆಗೆ ಮುಕ್ತಾಯವಾದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಿರೋಧಪಕ್ಷಗಳ ಸಭಾತ್ಯಾಗದ ಮಧ್ಯೆಯೂ ದೆಹಲಿ ವಿಶೇಷ ಪೊಲೀಸ್ ಮಸೂದೆ, ಸಿವಿಸಿ ಮಸೂದೆಯನ್ನು ತಿದ್ದುಪಡಿ ಮಾಡಲಾಗಿದೆ. ಈ ಮೂಲಕ ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಇಡಿ, ಸಿಬಿಐ ನಿರ್ದೇಶಕರ ಅಧಿಕಾರವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ.
ಚುನಾವಣೆಯ ಸಂದರ್ಭದಲ್ಲಿ ಕೇಂದ್ರದ ಸಂಸ್ಥೆಗಳು ಚುರುಕಾಗಿರುತ್ತವೆ. ನನಗೆ ನ್ಯಾಯಾಂಗದ ಬಗ್ಗೆ ಅಪಾರ ಗೌರವವಿದೆ. ಆದರೆ ಈಗಿರುವ ಪಕ್ಷಪಾತಿ ರಾಜಕೀಯ ವಾತಾವರಣದಿಂದ ಜನರಿಗೆ ನ್ಯಾಯ ಸಿಗುತ್ತಿಲ್ಲ, ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ’ ಎಂದು ಸಿಎಂ ಮಮತಾ ಬ್ಯಾನರ್ಜಿ ತಾವು ಬರೆದಿರುವ ಪತ್ರದಲ್ಲಿ ಗುಡುಗಿದ್ದಾರೆ.