ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿದ್ದನ್ನು ವಿರೋಧಿಸಿ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದಲ್ಲಿ ಕೆರಗೋಡಿನಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಪಾದಯಾತ್ರೆ ಅಂತ್ಯಗೊಂಡಿದೆ. ಇದೀಗ ಫೆಬ್ರವರಿ 9ರಂದು ಮಂಡ್ಯ ಬಂದ್ಗೆ ಕರೆ ನೀಡಿದ್ದಾರೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಸುಮಾರು 17 ಕಿ.ಮೀ. ಮಾರ್ಗದಲ್ಲಿ ಹನುಮ ಭಕ್ತರು ಘೋಷಣೆ ಕೂಗಿ ರಾಜ್ಯ ಸರ್ಕಾರವನ್ನು ತೀವ್ರವಾಗಿ ಖಂಡಿಸಿದ್ದಾರೆ. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಡೆದ ಪಾದಯಾತ್ರೆಯಲ್ಲಿ ಬಿಜೆಪಿ ನಾಯಕರಾದ ಸಿ.ಟಿ. ರವಿ, ಜೆಡಿಎಸ್ ನಾಯಕರಾದ ಎಚ್.ಡಿ ಕುಮಾರಸ್ವಾಮಿ, ಮಾಜಿ ಶಾಸಕ ಅನ್ನದಾನಿ, ಕೆಆರ್ಪಿಪಿ ಪಕ್ಷದ ನಾಯಕ ಜನಾರ್ದನ ರೆಡ್ಡಿ ಮತ್ತು ಇತರರು ಭಾಗವಹಿಸಿದ್ದರು. ದಾರಿಯಲ್ಲಿದ್ದ ಮಂಡ್ಯದ ಕಾಂಗ್ರೆಸ್ ಶಾಸಕ ರವಿ ಕುಮಾರ್ ಗಣಿಗ ಅವರ ಫ್ಲೆಕ್ಸ್ ಗಳು, ಭಾವಚಿತ್ರಗಳನ್ನು ಹರಿದು ಹಾಕಿದ್ದಾರೆ. ನಿನ್ನೆ ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜಸ್ತಂಭ ತೆರವುಗೊಳಿಸಿದ್ದು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಷಯ ರಾಜಕೀಯ ವಲಯಕ್ಕೆ ತಲುಪುತ್ತಿದ್ದಂತೆ ಅಸಮಾಧಾನ ಸ್ಫೋಟಗೊಂಡು ಪ್ರತಿಭಟನೆ ಸ್ವರೂಪ ಪಡೆದುಕೊಂಡಿದೆ.