ಮಂಗಳೂರು ಎಸ್ ಇಝಡ್ ಸ್ಥಾಪನೆಗೊಂಡದ್ದು ಸ್ಥಳೀಯ ಯುವಜನರಿಗೆ ಲಕ್ಷ ಗಟ್ಟಲೆ ಉದ್ಯೋಗ ಸೃಷ್ಟಿ ಎಂಬ ಭರವಸೆಯೊಂದಿಗೆ. ಆದರೆ ಅಲ್ಲಿ ನಡೆಯುತ್ತಿರುವುದು ಅಸ್ಸಾಂ, ಜಾರ್ಖಂಡ್, ಬಂಗಾಳ ರಾಜ್ಯಗಳ ಅಗ್ಗದ ಕಾರ್ಮಿಕರ ಜೀತಗಾರಿಕೆ ಎಂದು ಮಂಗಳೂರಲ್ಲಿ ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕಿಡಿಕಾರಿದ್ದಾರೆ.
ಸರಕಾರದ ಮೂಗಿನ ನೇರಕ್ಕೆ ನಡೆಯುವ ಇಂತಹ ಜೀತಗಾರಿಕೆಗೆ ಇಂದು ಬಡಪಾಯಿಗಳಾದ ಬಂಗಾಳದ ಐವರು ಕಾರ್ಮಿಕರ ಬಲಿಯಾಗಿದೆ. ಉಲ್ಕಾ ಎಂಬ ಮೀನು ಉದ್ಯಮದಲ್ಲಿ ನಡೆದ ಇಂತಹ ಕರುಳು ಹಿಂಡುವ ಅವಘಡಕ್ಕೆ ಕಂಪೆನಿಗೆ ತಾತ್ಕಾಲಿಕ ಬೀಗ ಜಡಿದು, ನಾಲ್ಕು ಸೂಪರ್ ವೈಸರ್ ಗಳನ್ನು ವಶಕ್ಕೆ ಪಡೆದರೆ ಸಾಕೇ..? ಕುಟುಂಬಕ್ಕೆ ನೀಡುವ ಜುಜುಬಿ ದುಡ್ಡು ಇದಕ್ಕೆ ಪರಿಹಾರವೇ..? ಎಂದು ಪ್ರಶ್ನಿಸಿದ್ದಾರೆ.
ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆ ನೀಡಿ ಈಶಾನ್ಯ ರಾಜ್ಯದ ಕಾರ್ಮಿಕರ ಜೀತಗಾರಿಕೆಗೆ ಅವಕಾಶ ಕೊಟ್ಟ ಜಿಲ್ಲೆಯ ಶಾಸಕ, ಸಂಸದರು, ಜಿಲ್ಲಾಡಳಿತದ ಚುಕ್ಕಾಣಿ ಹಿಡಿದಿರುವ ಅಧಿಕಾರಿಗಳು ಹೊಣೆ ಹೊರಬೇಡವೇ..? ಶಿಕ್ಷೆಗೆ ತಮ್ಮನ್ನು ಒಡ್ಡಿಕೊಳ್ಳಬೇಡವೇ..? ತುಳುನಾಡಿನ ಜನ ಸಮೂಹಕ್ಕೆ ಇದೆಲ್ಲಾ ಅರ್ಥ ಆಗುವುದು ಯಾವಾಗ ಎಂದು..? ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.