ಶುಕ್ರವಾರ ರಾತ್ರಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಮಣಿಪುರದ (Manipura) ಐವರು ಜೆಡಿಯು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಬಹುದೊಡ್ಡ ಆಘಾತ ನೀಡಿದ್ದಾರೆ.
ಈ ಕುರಿತು ಮಣಿಪುರ (Manipura) ವಿಧಾನಸಭೆಯ ಕಾರ್ಯದರ್ಶಿ ಕೆ.ಮೇಘಜಿತ್ ಸಿಂಗ್ ಅವರು ಹೇಳಿಕೆ ಬಿಡುಗಡೆ ಮಾಡಿದ್ದು, ಐವರು ಜೆಡಿಯು ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದನ್ನು ಸ್ಪೀಕರ್ ಅವರು ಅನುಮೋದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡು ಆರ್ಜೆಡಿ ಮತ್ತು ಕಾಂಗ್ರೆಸ್ ಜೊತೆ ಕೈಜೋಡಿಸಿರುವ ನಿತೀಶ್ ಕುಮಾರ್ ಬಿಹಾರದಲ್ಲಿ ಹೊಸ ಸರ್ಕಾರ ರಚನೆ ಮಾಡಿದ್ದಾರೆ. ಇದರ ಮಧ್ಯೆ ಮಣಿಪುರದಲ್ಲಿ ಐವರು ಜೆಡಿಯು ಶಾಸಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ : BIG BREAKING: ಬಿಹಾರ ಸಿಎಂ ನಿತೀಶ್ ಕುಮಾರ್ ರಾಜೀನಾಮೆ – ಮಹಾಮೈತ್ರಿ ಕೂಟ ಸರ್ಕಾರಕ್ಕೆ ಹಾದಿ ಸುಗಮ
ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಮಣಿಪುರ ವಿಧಾಸಭೆ ಚುನಾವಣೆಯಲ್ಲಿ ಜೆಡಿಯು 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. 60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 32 ಸ್ಥಾನಗಳಲ್ಲಿ ಗೆಲುವು ದಾಖಲಿಸಿ ಅಧಿಕಾರ ಉಳಿಸಿಕೊಂಡಿದೆ. ಈ ವೇಳೆ, ಜೆಡಿಯು ಶಾಸಕರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದರು.
ಕೆ.ಎಚ್. ಜೋಯ್ಕಿಶನ್, ಎನ್.ಸನತೆ, ಎಂಡಿ ಅಚಾಬ್ ಉದ್ದೀನ್, ಮಾಜಿ ಡಿಜಿಪಿ ಎಲ್ ಎಂ ಖೌಟೆ ಮತ್ತು ತಂಗಜಮ್ ಅರುಣ್ಕುಮಾರ್ ಬಿಜೆಪಿ ಸೇರ್ಪಡೆಯಾಗಿರುವ ಶಾಸಕರಾಗಿದ್ದಾರೆ. ಮಣಿಪುರದಲ್ಲಿ ಸದ್ಯ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದೆ.
ಇದನ್ನೂ ಓದಿ : ಮಣಿಪುರ ಭೂ ಕುಸಿತ : ಸಾವಿನ ಸಂಖ್ಯೆ 24 ಕ್ಕೆ ಏರಿಕೆ – ಇಂದು ಮತ್ತೆ ಭೂಕುಸಿತ