ಮಸ್ಕಿಯ (Maski) ಗುಡದೂರು ಬಳಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಮಂಗಳವಾರ ಕಾರೊಂದು ಉರುಳಿ ಬಿದ್ದು, ಒಂದೇ ಕುಟುಂಬದ ಮೂವರು ನೀರು ಪಾಲಾಗಿದ್ದಾರೆ.
ಗಂಗಾವತಿ ತಾಲ್ಲೂಕಿನ ಹೊಸಕೇರಿ ಕ್ಯಾಂಪಿನ ನಿವಾಸಿಗಳಾದ ಎಂ.ಸೂರ್ಯರಾವ್ (62), ಆತನ ಪತ್ನಿ ಎಂ.ಸುಬ್ಬಲಕ್ಷ್ಮೀ (58) ಹಾಗೂ ಕಾರು ಚಲಾಯಿಸುತ್ತಿದ್ದ ಮಗ ಎಂ. ಶ್ರೀನಿವಾಸ್ (40) ಮೃತಪಟ್ಟವರು.
ಮೃತರೆಲ್ಲರೂ ಸ್ವಂತ ಗ್ರಾಮ ಹೊಸಕೇರಿ ಕ್ಯಾಂಪಿನಿಂದ ಲಿಂಗಸುಗೂರು ತಾಲ್ಲೂಕಿನ ಗೋನವಾಟ್ಲ್ ಗ್ರಾಮಕ್ಕೆ ಇಂಡಿಗೊ ಕಾರಿನಲ್ಲಿ ಹೊರಟಿದ್ದರು. ಮಾರ್ಗಮಧ್ಯೆ ಗುಡದೂರು ಸಮೀಪ ಮುಖ ತೊಳೆಯುವ ಸಲುವಾಗಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಪಕ್ಕದ ಇಳಿಜಾರಿನಲ್ಲಿ ಕಾರು ನಿಲ್ಲಿಸಿದ್ದಾರೆ. ಮುಖ ತೊಳೆದು ಹೊರಡುವಾಗ ಕಾರು ಹಿಮ್ಮುಖವಾಗಿ ಚಲಿಸಿದ ಪರಿಣಾಮ ಎಲ್ಲರೂ ನೀರು ಪಾಲಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಘಟನಾ ಸ್ಥಳಕ್ಕೆ ಮಸ್ಕಿ ಸಿಪಿಐ ಸಂಜೀವ ಬಳಿಗಾರ, ಪಿಎಸ್ಐ ಸಿದ್ದರಾಮ ಬಿದರಾಣಿ ಭೇಟಿ ನೀಡಿ ಪರಿಶೀಲಿಸಿದರು. ಕ್ರೇನ್ ಹಾಗೂ ಸಿಂಧನೂರಿನ ಆಗ್ನಿ ಶಾಮಕ ಸಿಬ್ಬಂದಿ ಸಹಾಯದಿಂದ ಕಾಲುವೆಯಲ್ಲಿ ಮುಳಗಿದ್ದ ಕಾರನ್ನು ಹೊರ ತೆಗೆಯಲಾಯಿತು. ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಇದನ್ನೂ ಓದಿ : Accident – ಭೀಕರ ಅಪಘಾತದಲ್ಲಿ 9 ಮಂದಿ ದುರ್ಮರಣ