ಉತ್ತರಪ್ರದೇಶದ ಅಜಂಗಢ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕೂದಲೆಳೆಯ ಅಂತರದಲ್ಲಿ ಸಮಾಜವಾದಿ ಪಕ್ಷ ಸೋತಿದ್ದು, ಬಿಜೆಪಿ ಅಭ್ಯರ್ಥಿ ದಿನೇಶ್ ಲಾಲ್ ಯಾದವ್ 8,679 ಮತಗಳಿಂದ ಗೆದ್ದಿದ್ದಾರೆ. ಈ ಮೂಲಕ ಮಾಜಿ ಸಿಎಂ ಅಖಿಲೇಶ್ ಸಿಂಗ್ ಯಾದವ್ ಪ್ರತಿನಿಧಿಸ್ತಿದ್ದ ಕ್ಷೇತ್ರದಲ್ಲೇ ಎಸ್ಪಿ ಸೋತಿದೆ.
ಪ್ರತಿ ಸುತ್ತಿನ ಮತ ಎಣಿಕೆಯಲ್ಲೂ ರೋಚಕ ತಿರುವು ಪಡೆದುಕೊಳ್ಳುತ್ತಿದ್ದ ಅಜಂಗಢ ಕೊನೆಗೆ ಬಿಜೆಪಿ ಪಾಲಾಯಿತು.
ಈ ಮೂಲಕ ರಾಂಪುರ ಕ್ಷೇತ್ರದ ಜೊತೆಗೆ ಎಸ್ಪಿ ಬಳಿಯಿದ್ದ ಎರಡೂ ಕ್ಷೇತ್ರಗಳನ್ನೂ ಬಿಜೆಪಿ ಉಪ ಚುನಾವಣೆ ಮೂಲಕ ಕಸಿದುಕೊಂಡಿದೆ.
ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರುವುದನ್ನು ತಪ್ಪಿಸಿ ಬಿಜೆಪಿ ಮತ್ತೆ ಅಧಿಕಾರಕ್ಕೇರಲು ಸಹಾಯ ಮಾಡಿದ್ದ ಮಾಜಿ ಮುಖ್ಯಮಂತ್ರಿ ಮಾಯಾವತಿ, ಲೋಕಸಭಾ ಉಪ ಚುನಾವಣೆಯಲ್ಲೂ ಅದೇ ತಂತ್ರ ಹೆಣೆದು ಮಾಜಿ ಸಿಎಂ ಅಖಿಲೇಶ್ ಸಿಂಗ್ ಯಾದವ್ಗೆ ಆಘಾತ ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ದಿನೇಶ್ ಲಾಲ್ ಯಾದವ್ 3,12,768 ಮತಗಳನ್ನು ಪಡೆದರೆ ಸಮಾಜವಾದಿ ಪಕ್ಷದ ಧರ್ಮೆಂದ್ರ ಯಾದವ್ 3,04,089 ಮತಗಳನ್ನು ಪಡೆದಿದ್ದಾರೆ. ಬಿಎಸ್ಪಿ ಅಭ್ಯರ್ಥಿ ಶಾಹಾ ಅಲಿಯಾಸ್ ಗುಡ್ಡು ಜಮಾಲಿ 2,66,210 ಮತಗಳನ್ನು ಪಡೆದಿದ್ದಾರೆ.
ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರ ಶೇಕಡಾ 1ಕ್ಕಿಂತಲೂ ಕಡಿಮೆ ಅಂದರೆ ಶೇಕಡಾ 0.95ರಷ್ಟು.
ಮುಸ್ಲಿಂ ಮತ್ತು ಯಾದವ್ ಬಾಹುಳ್ಯದ ಅಜಂಗಢದಲ್ಲಿ ಮುಸಲ್ಮಾನ ಸಮುದಾಯ ಪ್ರಬಲ ಅಭ್ಯರ್ಥಿಯನ್ನು ಹಾಕಿದ ಮಾಯಾವತಿ ತಾವು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದೇ ಹೋದರೂ ಹೇಗೆ ಪ್ರಬಲ ಅಭ್ಯರ್ಥಿಗಳನ್ನು ಹಾಕಿ ಸಮಾಜವಾದಿ ಪಕ್ಷಕ್ಕೆ ಸೋಲುಣಿಸಬಲ್ಲೇ ಮತ್ತು ಆ ಮೂಲಕ ಉತ್ತರಪ್ರದೇಶ ರಾಜಕೀಯದಲ್ಲಿ ತಾವು ಸೀಟು ಗೆಲ್ಲದೇ ಹೋದರೂ ಗೆಲುವಿಗೆ ವಿಘ್ನ ತಂದಿಡುವ ಮೂಲಕ ತಮ್ಮ ರಾಜಕೀಯ ಪ್ರಾಮುಖ್ಯತೆಯನ್ನು ಸಾಬೀತುಪಡಿಸಿದ್ದಾರೆ.