ಬೆಂಗಳೂರು ವಿಶ್ವ ವಿದ್ಯಾಲಯದ ಆವರಣದಲ್ಲಿ ಸಚಿವ ಮುನಿರತ್ನ ಪ್ಲೆಕ್ಸ್ಗೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದರೆ. ಆದರೆ, ಸಚಿವರ ಗನ್ ಮ್ಯಾನ್ ವಿರೋಧ ವ್ಯಕ್ತಪಡಿಸಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಲ್ಲದೇ ಜಾತಿ ನಿಂದನೆ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಈ ವಿಚಾರವಾಗಿ ಇಂದು ವಿವಿ ಆವರಣದಲ್ಲಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ.
ವಿವಿ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಬೆಂಗಳೂರು ವಿಶ್ವವಿದ್ಯಾಲಯ ಆವರಣ ಕೆಸರುಮಯವಾಗಿದೆ ಎಂಬ ವಿಚಾರ ನಿನ್ನೆ ನನಗೆ ತಿಳಿದು ಬಂತು. ಸ್ಥಳೀಯ ಮಂತ್ರಿಗಳು ಇಲ್ಲಿನ ವಿದ್ಯಾರ್ಥಿಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಕರಣ ದಾಖಲಿಸಲು ಪೊಲೀಸರಿಗೆ ಆದೇಶ ನೀಡಿದ್ದಾರೆ ಎಂಬ ವಿಚಾರ ತಿಳಿಯಿತು.
ಇದುವರೆಗೂ ವಿವಿ ಆವರಣವನ್ನು ಸರ್ಕಾರಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗಿದೆಯೇ ಹೊರತು ರಾಜಕೀಯ ಕಾರಣಗಳಿಗೆ ಬಳಸಿಕೊಳ್ಳಲಾಗಿಲ್ಲ. ನಾನು ಇಲ್ಲಿಗೆ ಬರುವಾಗ ಆವರಣದಲ್ಲಿರುವ ಫ್ಲೆಕ್ಸ್ ಗಳನ್ನೆಲ್ಲಾ ಗಮನಿಸಿದ್ದೇನೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇಲ್ಲಿನ ಹಾಸ್ಟೆಲ್ಗಳಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದಾರೆ. ನಾನು ಕೂಡ ಇಲ್ಲಿ ವಿದ್ಯಾರ್ಥಿ ನಾಯಕನಾಗಿ ಹಲವು ವರ್ಷಗಳ ಕಾಲ ಈ ವಿಶ್ವವಿದ್ಯಾಲಯದ ಜತೆ ಸಂಪರ್ಕ ಹೊಂದಿದ್ದೆ. ಇಲ್ಲಿ ಎಲ್ಲ ಪಕ್ಷದ ಹಲವಾರು ನಾಯಕರು ತಯಾರಾಗಿದ್ದಾರೆ. ಈಗ ನಾಯಕರನ್ನು ಚಿವುಟಿ ಹಾಕುವ ಪ್ರಯತ್ನ ನಡೆಯುತ್ತಿದೆ.
ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣಕ್ಕೆ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿ ಅಸಭ್ಯವಾಗಿ ನಡೆದುಕೊಂಡಿರುವುದನ್ನು ನಾನು ವಿಡಿಯೋಗಳಲ್ಲಿ ಗಮನಿಸಿದ್ದೇನೆ.
ಇದು ಈ ದೇಶದ ಭವಿಷ್ಯದ ವಿಚಾರ. ಬೆಂಗಳೂರು ವಿವಿಯನ್ನು ಇಡೀ ವಿಶ್ವವೇ ಗಮನಿಸುತ್ತಿದೆ. ವಿಶ್ವವಿದ್ಯಾಲಯ ರಾಜಕೀಯ ನಾಯಕರು ಹಾಗೂ ವಿಶ್ವದ ಉತ್ತಮ ಸಾಧಕರನ್ನು ತಯಾರು ಮಾಡಿದೆ. ಈ ವಿವಿಯ ಪರಂಪರೆಯನ್ನು ಉಳಿಸಲು ನೀವು ಹೋರಾಟ ಮಾಡಿದ್ದೀರಿ. ನೀವು ಯಾವುದೇ ಒಂದು ಪಕ್ಷ ಅಥವಾ ಸಂಘಟನೆಗೆ ಬೆಂಬಲಿಸಿ ಹೋರಾಟ ಮಾಡಿಲ್ಲ. ನೀವು ಈ ವಯಸ್ಸಿನಲ್ಲಿ ನಿಮ್ಮ ಹಕ್ಕನ್ನು ರಕ್ಷಿಸಿ ಕೊಳ್ಳದಿದ್ದರೆ ಯಾವ ವಯಸ್ಸಿನಲ್ಲಿ ಮಾಡಿಕೊಳ್ಳಲು ಸಾಧ್ಯ? ಇದು ವಿದ್ಯಾರ್ಥಿಗಳ ಶಕ್ತಿಯಾಗಿದ್ದು, ಇದು ದೇಶದ ಶಕ್ತಿಯಾಗಿದೆ. ಈ ವಿಚಾರ ಆ ಸಚಿವರ ತಲೆಯಲ್ಲಿ ಇಲ್ಲ.
ನನಗೆ ರಾಜಕೀಯವಾಗಿ ಬೆಂಬಲಿಸಿ ಎಂದು ಕೇಳಲು ನಾನಿಲ್ಲಿಗೆ ಬಂದಿಲ್ಲ. ನಿಮ್ಮ ನೋವಿನ ಜತೆ ನಾನು ಹಾಗೂ ನಮ್ಮ ಪಕ್ಷ ಇದೆಯೆಂದು ಹೇಳಲು ಬಂದಿದ್ದೇನೆ. ಪಠ್ಯಪುಸ್ತಕ ಪರಿಷ್ಕರಣೆ ಮೂಲಕ ನಮ್ಮ ಸಂಸ್ಕೃತಿ, ಇತಿಹಾಸ, ಪರಂಪರೆ ಎಲ್ಲವನ್ನು ತಿರುಚಲಾಗಿದೆ. ಬುದ್ಧ, ಬಸವಣ್ಣ, ಅಂಬೇಡ್ಕರ್, ವಾಲ್ಮೀಕಿ ಕಾಳಿದಾಸ, ಕನಕದಾಸ, ನಾರಾಯಣ ಗುರುಗಳ ಪಠ್ಯ ಬದಲಾವಣೆ ಮಾಡಲಾಗಿದೆ. ಇದಕ್ಕೆ ನಾವು ನೀವು ಅವಕಾಶ ನೀಡಲು ಸಾಧ್ಯವಿಲ್ಲ.
ಈ ವಿಚಾರವಾಗಿ ಶೀಘ್ರವೇ ಸಭೆ ಕರೆದು ಹಳ್ಳಿಯಿಂದ ರಾಜ್ಯಮಟ್ಟದವರೆಗೆ ಹೋರಾಟ ಮಾಡಬೇಕಾಗಿದೆ. ಈ ವಿಚಾರವಾಗಿ ಯಾರು ಹೋರಾಟ ಮಾಡಿದರು ನೀವು ಪಕ್ಷತೀತವಾಗಿ ಬೆಂಬಲ ನೀಡಿ, ಇತಿಹಾಸ ಉಳಿಸಬೇಕು. ಆ ಮೂಲಕ ನಮ್ಮ ಸಂವಿಧಾನವನ್ನು ಉಳಿಸಿಕೊಳ್ಳಿ ಎಂದು ಡಿಕೆ ಶಿವಕುಮಾರ್ ಬೆಂಗಳೂರು ವಿವಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.