ಇಂದು ಎಲ್ಲರೂ ಆಹಾರ ವೈವಿಧ್ಯತೆಯನ್ನು ಬಯಸುತ್ತಾರೆ. ಅದರಲ್ಲೂ ನಗರ ಪ್ರದೇಶದಲ್ಲಿರುವವರಂತೂ ಪ್ರತೀ ದಿನ ಅಲ್ಲದಿದ್ದರೂ ವೀಕೆಂಡ್ನಲ್ಲಂತೂ ವೈವಿಧ್ಯಮಯ ಆಹಾರಗಳಿಗೆ ತಮ್ಮ ಆದ್ಯತೆಯನ್ನು ನೀಡುತ್ತಿದ್ದಾರೆ. ಚಾಟ್ಸ್ ಐಟಮ್ಗಳಿರಬಹುದು, ಚೈನೀಸ್ ಫುಡ್ ಗಳಿರಬಹುದು, ತರೇವಾರಿ ನಾನ್ ವೆಜ್ ಐಟಮ್ಗಳಿರಬಹುದು ಹೀಗೆ ಜನರ ಫುಡ್ ಹ್ಯಾಬಿಟ್ ವಿಭಿನ್ನ ವಿಶಿಷ್ಟ. ಈ ಸಾಲಿಗೆ ಸೇರುವಂತದ್ದು ರೈಸ್ ಐಟಮ್ಗಳು. ಜೀರಾ ರೈಸ್, ಬಿರಿಯಾನಿ, ಫ್ರೈಡ್ ರೈಸ್,ಪಲಾವ್ ,ಪಾಲಕ್ ರೈಸ್, ಟೊಮೇಟೊ ರೈಸ್ ,ಲೆಮನ್ ರೈಸ್, ಪುದೀನಾ ರೈಸ್ ಹೀಗೆ ಈ ಪಟ್ಟಿ ಬೆಳೆಯುತ್ತದೆ.
ಹೀಗೆ ರೈಸ್ ಐಟಮ್ಗಳಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವುದು “ಪುದೀನಾ ರೈಸ್”.
ಹಾಗಾದರೆ ಇನ್ನೇಕೆ ತಡ ಸ್ವಾದಿಷ್ಟಕರವಾಗಿ ಪುದೀನಾ ರೈಸ್ ಅನ್ನು ಮಾಡುವ ವಿಧಾನವನ್ನು ಓದಿಕೊಂಡು ನಿಮ್ಮ ಮನೆಯಲ್ಲೇ ನೀವು ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಪದಾರ್ಥಗಳು
ಅಕ್ಕಿ 1 ಕಪ್, ಪುದೀನಾ 2-3 ಕಟ್ಟು, ಈರುಳ್ಳಿ 2, ಹಸಿಮೆಣಸು 6, ಕಾಯಿ ನಾಲ್ಕು ಚಮಚ, ಹುಣಸೆ ಹುಳಿ 1 ಗೋಲಿ ಗಾತ್ರ, ಎಣ್ಣೆ 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ ಸಾಸಿವೆ, ಉದ್ದು, ಕಡಲೇಬೇಳೆ, ಗೋಡಂಬಿ, ಕರಿಬೇವು.
ಮಾಡುವ ವಿಧಾನ
ಅಕ್ಕಿಯನ್ನು ಚೆನ್ನಾಗಿ ತೊಳೆದು ಅರ್ಧ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಬಳಿಕ ಇದನ್ನು ಕುಕ್ಕರ್ನಲ್ಲಿ ಬೇಯಿಸಿ ಅನ್ನ ತಯಾರಿಸಿಟ್ಟುಕೊಳ್ಳಿ.
ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಹೆಚ್ಚಿದ ಮೆಣಸಿನಕಾಯಿ ಹಾಗೂ ಪುದೀನಾ ಹಾಕಿ ಚೆನ್ನಾಗಿ ಹುರಿಯಿರಿ.
ಸೊಪ್ಪು ಚೆನ್ನಾಗಿ ಬಾಡಿದ ಬಳಿಕ ತೆಂಗಿನ ತುರಿ ಹಾಕಿ 30 ಸೆಕೆಂಡ್ ಹುರಿಯಿರಿ. ಸ್ಟೌ ಆಫ್ ಮಾಡಿ ಆರಲು ಬಿಡಿ.
ಇದು ಆರಿದ ಬಳಿಕ ನೀರಿನಲ್ಲಿ ನೆನೆಸಿಟ್ಟು ಹುಣಸೆಹುಳಿ ಹಾಗೂ ಉಪ್ಪು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
ಬಾಣಲೆಯಲ್ಲಿ ಮತ್ತೆ ಸ್ವಲ್ಪ ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಿ. ಚಟಪಟಗುಟ್ಟಿದ ಬಳಿಕ ಉದ್ದು, ಕಡಲೇಬೇಳೆ, ಗೋಡಂಬಿ, ಕರಿಬೇವು ಹಾಕಿ ಹುರಿಯಿರಿ. ಗೋಂಡಬಿ ಕೆಂಪಗಾಗುತ್ತಿದ್ದಂತೆಯೇ, ಸಣ್ಣದಾಗಿ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ಕೆಂಪಗಾಗುವವರೆಗೆ ಹುರಿಯಿರಿ.
ಇದಕ್ಕೆ ರುಬ್ಬಿದ ಪುದೀನಾ ಪೇಸ್ಟ್ ಸೇರಿಸಿ ಸ್ವಲ್ಪ ಬಿಸಿಯಾಗುವವರೆಗೆ ಹುರಿದು ಸ್ಟೌ ಆಫ್ ಮಾಡಿ.
ಎಷ್ಟು ಸ್ಟ್ರಾಂಗ್ ಬೇಕೋ ಅದಕ್ಕೆ ಸರಿಯಾಗಿ ಅನ್ನ ಹಾಕಿ ಕಲೆಸಿಕೊಳ್ಳಿ. ಸಂಡೇ ಮಧ್ಯಾಹ್ನದ ಊಟಕ್ಕೆ ಅಥವಾ ಬಾಕ್ಸ್ಗೆ ಇದು ಹೇಳಿ ಮಾಡಿಸಿದ ರೆಸಿಪಿ.