ಅದು ಪಂಚ ರಾಜ್ಯ ಚುನಾವಣೆ ಫಲಿತಾಂಶ ಹೊರಬಂದ ನಂತರ ಎರಡನೇ ಹಂತದ ಬಜೆಟ್ ಅಧಿವೇಶನ ಶುರುವಾದ ದಿನ. ಲೋಕಸಭೆಗೆ ಹೆಜ್ಜೆ ಇಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಬಿಜೆಪಿ ಸಂಸದರೆಲ್ಲಾ ಒಟ್ಟಾಗಿ ಮೇಜು ಕುಟ್ಟುವ ಮೂಲಕ ಮೋದಿ ಮೋದಿ ಎಂದು ಘೋಷಣೆ ಕೂಗಿದ್ದರು. ಈ ಮೂಲಕ ನಾಲ್ಕು ರಾಜ್ಯಗಳಲ್ಲಿ ಕಮಲ ಅರಳಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದರು.
ಇದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಕಂಡಿದ್ದೇಗೆ ಗೊತ್ತೆ. ಅವರೇ ಸಂಸತ್ತಿನಲ್ಲಿ ಹೇಳಿಕೊಂಡಂತೆ ಮೋದಿ ಗ್ಲಾಡಿಯೆಟರ್ ಆಗಿ ಕಂಡಿದ್ದಾರೆ. ಸಂಸತ್ತು ರೋಮ್ ನ ಕೊಲ್ಲೋಸಿಯಂನಂತೆ ಕಂಡಿತ್ತು ಎಂದು ವ್ಯಂಗ್ಯ ಮಾಡಿದ್ದಾರೆ.
ನಾಗರೀಕ ವಿಮಾನಯಾನ ಇಲಾಖೆಗೆ ಸಂಬಂಧಿಸಿ, ಮಹಿಳಾ ಸಾಧಕರ ಹೆಸರನ್ನು ಉಲ್ಲೇಖಸಿದ ಮಹುವಾ ಮೊಯಿತ್ರಾ, ನಿಜವಾದ ಚಪ್ಪಾಳೆ, ಗೌರವ ಸಲ್ಲಬೇಕಿರುವುದು ಇವರಿಗೆ ಎಂದಿದ್ದಾರೆ.
1972ರಲ್ಲಿ ವಿಪಕ್ಷದ ಸಾಲಿನಲ್ಲಿ ಕುಳಿತಿದ್ದಂತಹ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸದನದಲ್ಲಿ ಮಾಡಿದ್ದ ಭಾಷಣದ ತುಣುಕನ್ನು ಉಲ್ಲೇಖಿಸಿದ್ದಾರೆ. ಅದು ಹೀಗಿದೆ..
“ಇತ್ತೀಚಿನ ದೆಹಲಿ ವಾತಾವರಣ ಹೇಗಿದೆ ಎಂದರೇ ಜೋರಾಗಿ ಉಸಿರಾಡಲು ಸಹ ಕಷ್ಟ ಆಗುತ್ತಿದೆ. ಆರಾಮಾಗಿ ಉಸಿರಾಡಲು ಸಾಧ್ಯವಾಗುತ್ತಿಲ್ಲ. ಬೆಳಗ್ಗೆಯಿಂದ ರಾತ್ರಿವರೆಗೂ ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಧಾನಮಂತ್ರಿಗಳ ಹೆಸರನ್ನು ಜಪ ಮಾಡುತ್ತಲೇ ಇರುತ್ತಾರೆ. ಸಿನಿಮಾ ಪರದೆಗಳಲ್ಲಿ ಸುಳ್ಳು ಸುದ್ಧಿ ಹಾಕುತ್ತಿದ್ದಾರೆ. ಇದರ ವಿರುದ್ಧ ವಿರೋಧ ಪಕ್ಷದಲ್ಲಿ ಕುಳಿತವರು ಹೇಗೆ ಹೋರಾಡದೆ ಇರಲು ಸಾಧ್ಯ.”
ಅಂದು ವಾಜಪೇಯಿ ಅವರು ಹೇಳಿಕೆ ನೀಡಿದ್ದ ಪಕ್ಷದವರೇ ಇಂದು 1ನೆ ಶತಮಾನದಲ್ಲಿದ್ದ ರೋಮ್ ನ ಕಲ್ಲೋಸಿಯಂನಂತಹ ವಾತಾವರಣ ಸೃಷ್ಟಿ ಮಾಡಿದ್ದಾರೆ. ಮೋದಿಯನ್ನು ಗ್ಲಾಡಿಯೆಟರ್ ರೀತಿಯಲ್ಲಿ ಬಿಂಬಿಸಿ ಮೋದಿ ಮೋದಿ.. ಉಘೇ ಉಘೇ ಎನ್ನುತ್ತಿದ್ದಾರೆ.ಇದಕ್ಕಿಂತ ದೊಡ್ಡ ದುರಂತ ಇನ್ನೇನಿದೆ ಎಂದು ಮಹುವಾ ಮೊಯಿತ್ರಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪೈಲೆಟ್ ಪರವಾನಗಿ ಪಡೆದ ಮೊದಲ ಮಹಿಳೆ ಉರ್ಮಿಳಾ ಪರೇಖ್, ಮೊದಲ ವಾಣಿಜ್ಯ ಪೈಲೆಟ್ ಪ್ರೇಮ್ ಮಾಥುರ್, ಇಂಡಿಯನ್ ಏರ್ ಲೈನ್ಸ್ ನ ಮೊದಲ ಮಹಿಳಾ ಪೈಲೆಟ್ ದುರ್ಬ ಬ್ಯಾನರ್ಜಿ, ಐಎಎಫ್ ನ ಮೊದಲ ಫ್ಲೈ ಆಫೀಸರ್ ಗುಂಜನ್ ಸಕ್ಸೆನಾಗೆ ನಿಜವಾಗಿಯೂ ಇಂತಹ ಗೌರವ ಸಿಕ್ಕಬೇಕಿತ್ತು ಎಂದು ಮಹುವಾ ಮೊಯಿತ್ರಾ ಹೇಳಿಕೆ ನೀಡಿದ್ದಾರೆ. ಮಹುವಾ ಮೊಯಿತ್ರಾ ಭಾಷಣದಿಂದ ಬಿಜೆಪಿ ತೀವ್ರ ಮುಜುಗರ ಅನುಭವಿಸಿದರೆ, ವಿರೋಧ ಪಕ್ಷಗಳು ತಲೆದೂಗಿದವು.