ನಮ್ಮ ದುಡ್ಡು ನಮಗೆ ಕೊಟ್ಟರೆ ಸಾಕಾಗಿದೆ. ನಮ್ಮ ಬೇಡಿಕೆ ಏನಿದೆ, ಜಿಎಸ್ಟಿ ಮತ್ತು ನಮ್ಮಲ್ಲಿ ಸಂಗ್ರಹವಾಗುತ್ತಿರುವ ಕಸ್ಟಮ್ಸ್ ಟ್ಯಾಕ್ಸ್, ಡೈರೆಕ್ಟ್ ಟ್ಯಾಕ್ಸ್ನಲ್ಲಿ ದಕ್ಷಿಣ ಭಾರತಕ್ಕೆ ಬಹಳಷ್ಟು ಅನ್ಯಾಯ ಆಗ್ತಿರುವುದನ್ನು ನಾವು ನೋಡ್ತಾ ಇದ್ದೀವಿ.
ಒಟ್ಟಾರೆ ನಮ್ಮ ಪಾಲು ಏನು ಸಿಗಬೇಕಿದೆ, ಅಭಿವೃದ್ಧಿಯ ಹಣ ಇವತ್ತು ಉತ್ತರ ಭಾರತದ ಎತ್ಕೊಂಡು ಹೋಗಿ ಹಂಚ್ತಾರೋದನ್ನು ಕಾಣ್ತಾ ಇದ್ದೇವೆ.
ನಮಗೆ ಎಲ್ಲ ವಿಚಾರಗಳಲ್ಲೂ ಅನ್ಯಾಯವಾಗ್ತಿದೆ. ನಾವು ಅದನ್ನು ಮುಂದಿನ ದಿನಗಳಲ್ಲಿ ಖಂಡಿಸದೇ ಇದ್ದರೆ, ಪ್ರತ್ಯೇಕ ರಾಷ್ಟ್ರಕ್ಕೂ ಬೇಡಿಕೆ ಇಡಬೇಕಾದಂತ ಅನಿವಾರ್ಯತೆ ಪರಿಸ್ಥಿತಿಯನ್ನು ಹಿಂದಿ ಪ್ರದೇಶದವರು ನಮ್ಮ ಮೇಲೆ ಹೇರುತ್ತಿದ್ದಾರೆ.
ನಮ್ಮ ಹಣಕಾಸು ಪರಿಸ್ಥಿತಿ, ನಮ್ಮಿಂದ 4 ಲಕ್ಷ ಕೋಟಿ ತೆರಿಗೆ ಹಣ ವಿವಿಧ ರೀತಿಯಲ್ಲಿ ಪಡೀತಾ ಇದ್ದಾರೆ. ನಮಗೆಷ್ಟು ಕೊಡ್ತಾ ಇದ್ದಾರೆ. ಇದನ್ನು ಪ್ರಶ್ನೆ ಮಾಡ್ಬೇಕಾಗುತ್ತೆ. ಇದು ಸರಿ ಹೋಗ್ಲಿಲ್ಲ ಅಂದ್ರೆ ಈಗಾಗಲೇ 16ನೇ ಹಣಕಾಸು ಕೂಡಾ ಪ್ರಾರಂಭ ಆಗೋದ್ರಿಂದ ಅದ್ರಲ್ಲೂ ಸರಿಪಡಿಸ್ಲಿಲ್ಲ ಅಂದ್ರೆ ದಕ್ಷಿಣ ಭಾರತದವರೆಲ್ಲರೂ ಕೂಡಾ ಕೂಗನ್ನು ಎತ್ಬೇಕಾಗುವುದು ಅನಿವಾರ್ಯ.
ಗುರುವಾರ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೇಖಾನುದಾನ ಮಂಡಿಸಿದ ಬಳಿಕ ದೆಹಲಿಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಿ ಕೆ ಸುರೇಶ್ ಕೊಟ್ಟ ಹೇಳಿಕೆ.
ಡಿ ಕೆ ಸುರೇಶ್ ಅವರ ಪ್ರತ್ಯೇಕ ರಾಷ್ಟ್ರದ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕ್ರಿಯೆ ಹೀಗಿದೆ:
ದೇಶದ ಸಾರ್ವಭೌಮತೆ ಇರಬೇಕು. ಆದರೆ ರಾಜ್ಯಗಳಿಗೆ ಅವರ ಪಾಲು ಕೊಡಬೇಕು. ಕೇಂದ್ರ @BJP4India ಸರ್ಕಾರ ರಾಜ್ಯಗಳ ಪಾಲನ್ನು ಕೊಡುತ್ತಿಲ್ಲ. ರಾಯಚೂರು ಜಿಲ್ಲೆಗೆ ಎಮ್ಸ್ ಸ್ಥಾಪನೆಗೆ ಒತ್ತಾಯಿಸಿದ್ದೆವು, ಪ್ರಯೋಜನ ಆಗಿಲ್ಲ. ನಮ್ಮಿಂದ 4 ಲಕ್ಷ ಕೋಟಿ ತೆರಿಗೆ ವಸೂಲಿ ಮಾಡುವ ಕೇಂದ್ರ ಸರ್ಕಾರ ನಮಗೆ, ನಮ್ಮ ನಾಡಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಿದೆ. ಅಖಂಡ ಭಾರತ, ಅಖಂಡ ಕರ್ನಾಟಕ ಉಳಿಯಬೇಕು. ಇದಕ್ಕಾಗಿ ರಾಜ್ಯಗಳ ಪಾಲನ್ನು ಚಾಚೂ ತಪ್ಪದೆ ಕೊಡಬೇಕು.
ಬಿಜೆಪಿ ಆಳ್ವಿಕೆಯ ಈ ‘‘ವಿನಾಶಕಾರಿ ಭಾರತ’’ದಲ್ಲಿ ದೇಶದ ಎಲ್ಲ ಜಾತಿ-ಧರ್ಮಗಳ ಬಡವರು, ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ವಿಶೇಷವಾಗಿ ದಲಿತ ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳು ದಮನಕ್ಕೀಡಾಗಿದ್ದಾರೆ, ಅವರ ಸಾಮಾಜಿಕ ಮತ್ತು ಆರ್ಥಿಕ ಬದುಕು ಅಧ:ಪತನಗೊಂಡಿದೆ. ಈ ದೃಷ್ಟಿಯಲ್ಲಿ ನಾವಿಂದು ಪ್ರಜಾಪ್ರಭುತ್ವದ ‘‘ಅಮೃತ ಕಾಲ’’ದಲ್ಲಿ ಇಲ್ಲ, ‘‘ಮೃತ ಕಾಲ’’ದಲ್ಲಿದ್ದೇವೆ.
ಎಂದು ಪ್ರಧಾನಿ ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಸಿದ್ದರಾಮಯ್ಯ ಅವರೂ ಪ್ರಸ್ತಾಪಿಸಿದ್ದಾರೆ.
ತಮ್ಮ ಸಹೋದರನ ಪ್ರತ್ಯೇಕ ರಾಷ್ಟ್ರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷರೂ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಪ್ರತಿಕ್ರಿಯೆಯಲ್ಲಿ ಸಮಾಜಾಯಿಷಿಯೂ ಇದೆ, ಸಮರ್ಥನೆಯೂ ಇದೆ, ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಆಕ್ರೋಶವೂ ಇದೆ.
ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಜನರ ಭಾವನೆ, ಬೇಸರ ಮತ್ತು ಅಭಿಪ್ರಾಯದ ಬಗ್ಗೆ ಸಂಸದ ಶ್ರೀ ಡಿ.ಕೆ.ಸುರೇಶ್ ಅವರು ಕನ್ನಡಿ ಹಿಡಿದಿರುವುದನ್ನು ಬಿಜೆಪಿಯವರು ತಿರುಚುತ್ತಿದ್ದಾರೆ. ಭಾರತದ ಐಕ್ಯತೆ, ಅಖಂಡತೆ ಬಗ್ಗೆ ನಮ್ಮ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ನಾವೆಲ್ಲಾ ಭಾರತ ಮಾತೆಯ ಮಕ್ಕಳು. ಹೀಗಿರುವಾಗ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಹಾಗಾದ್ರೆ ಕರ್ನಾಟಕದಿಂದ ಕೇಂದ್ರಕ್ಕೆ ಹೋಗಿದ್ದೆಷ್ಟು..?
ಕಳೆದ ನಾಲ್ಕು ಆರ್ಥಿಕ ವರ್ಷದಲ್ಲಿ ಅಂದರೆ 2018ರಿಂದ 2022ರ ಅವಧಿಯಲ್ಲಿ ಕರ್ನಾಟಕದಿಂದ ಆಗಿರುವ ಜಿಎಸ್ಟಿ ತೆರಿಗೆ ಸಂಗ್ರಹ
4.56 ಲಕ್ಷ ಕೋಟಿ ರೂಪಾಯಿ. ಈ ಅವಧಿಯಲ್ಲಿ ಕರ್ನಾಟಕದಿಂದ ಕೇಂದ್ರಕ್ಕೆ ಹೋಗಿರುವ ಆದಾಯ ತೆರಿಗೆ 9 ಲಕ್ಷದ 47 ಸಾವಿರ ಕೋಟಿ ರೂಪಾಯಿ. ಒಟ್ಟು ತೆರಿಗೆ ಸಂಗ್ರಹವಾಗಿದ್ದು 14 ಲಕ್ಷದ 4 ಲಕ್ಷ ಸಾವಿರ ಕೋಟಿ ರೂಪಾಯಿ.
ಆದರೆ ಕೇಂದ್ರದಿಂದ ಕರ್ನಾಟಕಕ್ಕೆ ಸಿಕ್ಕಿದ್ದೇನು..? ಆಗಿದ್ದು ಬರೀ ಘೋರ ಅನ್ಯಾಯ.
14ನೇ ಹಣಕಾಸು ಆಯೋಗದ ಪ್ರಕಾರ ಕರ್ನಾಟಕಕ್ಕೆ 1.82 ಲಕ್ಷ ಕೋಟಿ ರೂಪಾಯಿ ಸಿಗಬೇಕಿತ್ತು. ಆದರೆ 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕದ ತೆರಿಗೆ ಪಾಲು ಇಳಿದ್ದರಿಂದ ಸಿಕ್ಕಿದ್ದು 1.56 ಲಕ್ಷ ಕೋಟಿ ರೂಪಾಯಿ. ಈ ಮೂಲಕ ಕರ್ನಾಟಕಕ್ಕಾದ ತೆರಿಗೆ ಪಾಲಿನ ನಷ್ಟ ಬರೋಬ್ಬರೀ 26 ಸಾವಿರ ಕೋಟಿ ರೂಪಾಯಿ.
ಇನ್ನು ಕೇಂದ್ರ ಸರ್ಕಾರದಿಂದ ಸ್ಥಳೀಯ ಸಂಸ್ಥೆಗಳ ವಿಶೇಷ ಅನುದಾನ ಬಾಕಿ ಇರುವುದು 14,630 ಕೋಟಿ ರೂಪಾಯಿ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಬೇಕಿರುವ ಜಿಎಸ್ಟಿ ಹಿಂಬಾಕಿಯೂ ಕಡಿತವಾಗಿದೆ.
ಈ ಬಾರಿ ಕರ್ನಾಟಕ ಕೇಳಿರುವ ಬರ ಪರಿಹಾರ 18,177 ಕೋಟಿ ರೂ. ಈಗಾಗಲೇ ಕೇಂದ್ರದ ಅಧ್ಯಯನ ತಂಡ, ಬಿಜೆಪಿ ನಾಯಕರ ಅಧ್ಯಯನ ತಂಡ, ಜೆಡಿಎಸ್ ನಾಯಕರ ಅಧ್ಯಯನ ಪ್ರತ್ಯೇಕವಾಗಿ ಬರ ಅಧ್ಯಯನ ನಡೆಸಿದೆ. ಆದರೆ ನಮಗೆ ಸಿಕ್ಕಿದ್ದೇನು..?
ವಿಪತ್ತು ನಿರ್ವಹಣೆಗಾಗಿ 5 ವರ್ಷಗಳಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಕೊಡಬೇಕಿದ್ದ ಅನುದಾನ 4,369 ಕೋಟಿ ರೂಪಾಯಿ. ಆದರೆ ಪ್ರಧಾನಿ ಮೋದಿ ಸರ್ಕಾರ ಕೊಟ್ಟಿದ್ದು ಕೇವಲ 1,803 ಕೋಟಿ ರೂಪಾಯಿ.
ಈ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ ನಿಗದಿಯಾಗಿರುವ ವಿಪತ್ತು ಪರಿಹಾರದ ಮೊತ್ತ 929 ಕೋಟಿ ರೂಪಾಯಿ. ಆದರೆ ಈಗ ಬಿಡುಗಡೆ ಆಗಿರುವುದು ಮೊದಲ ಕಂತು ಮಾತ್ರ 348 ಕೋಟಿ ರೂಪಾಯಿ ಮಾತ್ರ.
ನಿನ್ನೆಯಷ್ಟೇ ಮಂಡನೆಯಾದ ಬಜೆಟ್ನಲ್ಲಿ ಕರ್ನಾಟಕದಲ್ಲಿ ರೈಲು ಯೋಜನೆಗಳಿಗೆ ಅನುದಾನ 37 ಕೋಟಿ ರೂಪಾಯಿಯಷ್ಟು ಕಡಿತವಾಗಿದೆ.
ಕಳೆದ ವರ್ಷದ ಘೋಷಣೆಯಷ್ಟೇ ಆಗಿರುವ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ಹಂಚಿಕೆ ಈ ಬಜೆಟ್ನಲ್ಲಿ ಮಾಡುವ ನಿರೀಕ್ಷೆ ಇತ್ತಾದರೂ ಅನುದಾನ ಹಂಚಿಕೆಯಾಗಿಲ್ಲ. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಬೇಡಿಕೆ ಈ ಬಾರಿಯೂ ಈಡೇರಿಲ್ಲ.
ಮಹತ್ವಾಕಾಂಕ್ಷೆಯ ಬೆಂಗಳೂರು ಉಪ ನಗರ ರೈಲು ಯೋಜನೆಗೆ ಈ ಬಜೆಟ್ನಲ್ಲಿ ಅನುದಾನವನ್ನೇ ಇಟ್ಟಿಲ್ಲ.
ತಮ್ಮ ವಿರುದ್ಧ ಬಿಜೆಪಿ ಟೀಕಿಸಿದ ಬಳಿಕ ಡಿ ಕೆ ಸುರೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
A Proud Indian & proud Kannadiga!
ದಕ್ಷಿಣ ರಾಜ್ಯಗಳು ಅದರಲ್ಲಿಯೂ ವಿಶೇಷವಾಗಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ನನ್ನ ಧರ್ಮ. ಕೇಂದ್ರ ಸರ್ಕಾರ ರಾಜ್ಯದ ಮೇಲೆ ತೋರಿಸುತ್ತಿರುವ ಮಲತಾಯಿ ಧೋರಣೆಯನ್ನು ಪ್ರಶ್ನೆ ಮಾಡುವ ಹಕ್ಕು ಎಲ್ಲರಿಗೂ ಇದೆ ಈ ಅನ್ಯಾಯ ಹೀಗೆ ಮುಂದುವರೆದರೆ, ಪ್ರತ್ಯೇಕದ ಕೂಗು ಈಗಾಗಲೇ ಎಲ್ಲ ಕಡೆ ಬಂದಿದೆ ಎಂದು ನಾನು ಹೇಳಿದ್ದೇನೆ.
ಭಾರತೀಯ ಜನತಾ ಪಕ್ಷದವರು ನನ್ನ ಹೇಳಿಕೆಯನ್ನು ತಿರುಚುವುದರಲ್ಲಿ ನಿಸ್ಸೀಮರು.ನಮ್ಮ ರಾಜ್ಯ ಕೇಂದ್ರದ ಬೊಕ್ಕಸಕ್ಕೆ ಅತಿ ಹೆಚ್ಚು ಕೊಡುಗೆ ನೀಡುವ ರಾಜ್ಯಗಳಲ್ಲಿ ಒಂದಾಗಿದೆ. ಅದಕ್ಕೆ ಪ್ರತಿಯಾಗಿ ನಾವು ಪಡೆದುಕೊಂಡ ಅನುದಾನ
ಯೋಜನೆಗಳ ವಿಚಾರದಲ್ಲಿ ಸಂಪೂರ್ಣ ಮಲತಾಯಿ ಧೋರಣೆ ನಮಗೆ ಸಿಕ್ಕಿದೆ. ಕರ್ನಾಟಕ ಭಾರತದಲ್ಲೇ ಇದೆ. ಇದನ್ನು ಒಕ್ಕೂಟ ಸರ್ಕಾರ ಮರೆಯಬಾರದು ಇದಕ್ಕೆ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದರೆ ನಾವು “ಪ್ರತ್ಯೇಕತಾವಾದಿ”ಗಳು!
ಮೇಕೆದಾಟು, ಮಹದಾಯಿ, ಬರ ಪರಿಹಾರ ಇರಲಿ, ಕೇಂದ್ರ ಬಿಜೆಪಿ ಸರಕಾರ ನಮ್ಮ ಯಾವುದೇ ಸಮಸ್ಯೆಗಳಿಗೆ ಈವರೆಗೆ ಸ್ಪಂದಿಸಿಲ್ಲ. ನಮ್ಮ ನಾಡಿನ ಭಾಷೆ ಉಳಿಸಿಕೊಳ್ಳಲು ನಾಮಫಲಕಗಳನ್ನು ಕನ್ನಡದಲ್ಲಿ ಕಡ್ಡಾಯ ಮಾಡಿದರೆ, ಅದನ್ನು ಬದಲಾಯಿಸಲು ಸುಗ್ರೀವಾಜ್ಞೆಗಳನ್ನೂ ಇವರು ರಾತ್ರೋ ರಾತ್ರಿ ತರುತ್ತಾರೆ.
ದೇಶಭಕ್ತಿ, ಐಕ್ಯತೆ ಮತ್ತು ಸಮಗ್ರತೆ ಬಗ್ಗೆ ಬೋಗಸ್ ಜನತಾ ಪಾರ್ಟಿಯವರಿಂದ ಕಲಿಯುವ ದುಸ್ಥಿತಿ ನಮಗೆ ಬಂದಿಲ್ಲ, ಬರುವುದೂ ಇಲ್ಲ. ಜೈ ಹಿಂದ್! ಜೈ ಕರ್ನಾಟಕ ಮಾತೆ!