ವಿದೇಶಗಳಿಗೆ ಸಕ್ಕರೆ ರಫ್ತು ಮೇಲೆ ನಿರ್ಬಂಧ ಹೇರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಯೋಚಿಸುತ್ತಿದೆ. ಕಳೆದ ವಾರವಷ್ಟೇ ಸರ್ಕಾರ ವಿದೇಶಗಳಿಗೆ ಗೋಧಿ ರಫ್ತನ್ನು ಸಂಪೂರ್ಣ ನಿಷೇಧಿಸಿತ್ತು.
ವಿದೇಶಗಳಿಗೆ ಸಕ್ಕರೆ ರಫ್ತಿನ ಮಿತಿಯನ್ನು ವರ್ಷಕ್ಕೆ 10 ದಶಲಕ್ಷ ಟನ್ಗೆ ನಿರ್ಬಂಧಿಸುವ ಬಗ್ಗೆ ಯೋಚನೆ ಮಾಡುತ್ತಿದೆ. ಸೆಪ್ಟೆಂಬರ್ಗೂ ಮೊದಲೇ ಈ ನಿರ್ಬಂಧ ಜಾರಿ ಆಗುವ ಸಾಧ್ಯತೆ ಇದೆ.
ಸದ್ಯಕ್ಕೆ ಭಾರತವೇ ಅತೀ ದೊಡ್ಡ ಸಕ್ಕರೆ ರಫ್ತು ರಾಷ್ಟ್ರವಾಗಿದೆ. ಬಾಂಗ್ಲಾದೇಶ, ಇಂಡೋನೇಷ್ಯಾ, ಮಲೇಷ್ಯಾ ಮತ್ತು ದುಬೈ ಭಾರತದಿಂದ ಅಧಿಕ ಪ್ರಮಾಣದಲ್ಲಿ ಸಕ್ಕರೆ ಖರೀದಿ ಮಾಡುತ್ತಿವೆ.
ಈ ಋತುವಿನಲ್ಲಿ ಭಾರತ 35 ದಶಲಕ್ಷ ಟನ್ ಸಕ್ಕರೆ ಉತ್ಪಾದಿಸುವ ನಿರೀಕ್ಷೆ ಇದ್ದು, 27 ದಶಲಕ್ಷ ಟನ್ ದೇಶದೊಳಗೆ ಬಳಕೆಗೆ ಅಗತ್ಯ ಇದೆ. ದೇಶದಲ್ಲಿ ಆಹಾರ ಪದಾರ್ಥಗಳು ದುಬಾರಿ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರ ಆಹಾರೋತ್ಪನ್ನಗಳ ರಫ್ತಿನ ಮೇಲೆ ನಿರ್ಬಂಧ ಹೇರುತ್ತಿದೆ. ಕಳೆದ ವಾರ ಮೋದಿ ಸರ್ಕಾರ ಘೋಷಿಸಿದ್ದ ಗೋಧಿ ರಫ್ತು ನಿಷೇಧ ನಿರ್ಧಾರ ಇಡೀ ವಿಶ್ವವನ್ನೇ ಚಕಿತಗೊಳಿಸಿತ್ತು.
ಸಕ್ಕರೆ ರಫ್ತು ಮಿತಿಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಮೇಲೆ ಪರಿಣಾಮ ಬೀರುವ ನಿರೀಕ್ಷೆ ಇದೆ.