ಎಲ್ಲಾ ಗೆಲುವುಗಳಿಗೆ, ಎಲ್ಲಾ ಸಾಧನೆಗಳಿಗೆ ಮೋದಿಯೇ ಕಾರಣ ಎನ್ನುತ್ತಿದ್ದ ಬಿಜೆಪಿಯ ಪ್ರಮುಖ ನಾಯಕರ ಬಾಯಲ್ಲಿ ಇದೇ ಮೊದಲ ಬಾರಿ ಅಚ್ಚರಿಯ ಮಾತು ಕೇಳಿಬಂದಿದೆ.
ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಬರೀ ಪ್ರಧಾನಿ ನರೇಂದ್ರ ಮೋದಿ ಹೆಸರೊಂದೇ ಸಾಕಾಗಲ್ಲ.. ಮೋದಿ ಅಲೆಯಲ್ಲಿ… ಮೋದಿ ಹೆಸರಲ್ಲಿ ಗೆದ್ದು ಬರ್ತೀವಿ ಎಂಬ ಭ್ರಮೆಯಿಂದ ಮೊದಲು ಹೊರಬನ್ನಿ ಎಂದು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್, ರಾಜ್ಯದ ಬಿಜೆಪಿ ನಾಯಕರಿಗೆ ಕಿವಿಮಾತು ಹೇಳುವ ಜೊತೆಗೆ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಧಾನಿ ನರೇಂದ್ರ ಮೋದಿ ಹೆಸರೊಂದೇ ಸಾಲುವುದಿಲ್ಲ. ಪ್ರತಿಯೊಬ್ಬರೂ ಪಕ್ಷ ಸಂಘಟನೆಗೆ ಒತ್ತು ಕೊಡಬೇಕು. ಪಕ್ಷ ಸಂಘಟನೆ ದುರ್ಬಲವಾಗದಂತೆ ನೋಡಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಚುನಾವಣೆ ಗೆಲ್ಲಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿರುವ ಲೋಪಗಳನ್ನು ಸರಿಪಡಿಸಬೇಕು. ಆಗ ಮಾತ್ರ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲು ಸಾಧ್ಯ ಎಂದು ತುಂಬಾ ಸ್ಪಷ್ಟವಾಗಿ ಕಿವಿ ಮಾತು ಹೇಳಿದ್ದಾರೆ. ಅಲ್ಲದೇ, ಪಕ್ಷದ ಪ್ರಭಾರಿಗಳು ಮತ್ತು ಸಹ ಪ್ರಭಾರಿಗಳು ಒಂದು ತಿಂಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಲೋಪದೋಷ, ವೀಕ್ನೆಸ್ ಪತ್ತೆ ಹಚ್ಚಿ, ವರದಿ ನೀಡಬೇಕು ಎಂದು ಬಿ ಎಲ್ ಸಂತೋಷ್ ಸೂಚನೆ ನೀಡಿದ್ದಾರೆ.
ಆಡಳಿತ ವಿರೋಧಿ ಅಲೆ ಎದುರಿಸಿ ಚುನಾವಣೆ ಗೆಲ್ಲಬೇಕು
ಇದೇ ವೇಳೆ,ಆಡಳಿತ ವಿರೋಧಿ ಅಲೆ ಎದುರಿಸಿ ಚುನಾವಣೆ ಗೆಲ್ಲಬೇಕು ಎಂದು ರಾಜ್ಯ ನಾಯಕರಿಗೆ ಬಿಎಲ್ ಸಂತೋಷ್ ಪಾಠ ಮಾಡಿದ್ದಾರೆ.
ನೋಡಿ, ಪಂಚರಾಜ್ಯ ಚುನಾವಣೆಗಳಲ್ಲಿ ಸಾಕಷ್ಟು ಆಡಳಿತ ವಿರೋಧಿ ಅಲೆಯಿತ್ತು. ಆದರೆ, ಅದನ್ನು ಗೆಲುವಾಗಿ ಪರಿವರ್ತಿಸುವಲ್ಲಿ ಪಕ್ಷ ಯಶಸ್ವಿಯಾಯಿತು. ಕರ್ನಾಟಕದಲ್ಲೂ ಕೂಡಾ ಅದಾಗಬೇಕು. ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲಲು, ಈಗಿನಿಂದಲೇ ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷ ಸಂಘಟಿಸಿ ಎಂದು ಕರೆ ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂಬುದನ್ನು ಬಿ ಎಲ್ ಸಂತೋಷ್ ಪರೋಕ್ಷವಾಗಿ ಒಪ್ಪಿಕೊಂದಿದ್ದಾರೆ.