ಜೈಲಿನಲ್ಲಿರುವ ಗಂಡನಿಂದ ಮಗು ಪಡೆಯಬೇಕೆಂದು ಬಯಸಿದ್ದ ಮಹಿಳೆಗೆ ನ್ಯಾಯಾಲಯ ನ್ಯಾಯ ನೀಡಿದ್ದು, ಗಂಡನನ್ನು 15 ದಿನ ಪೆರೋಲ್ ಮೇಲೆ ಬಿಡುಗಡೆ ಮಾಡಿದೆ. ರಾಜಸ್ತಾನದ ಜೈಪುರ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ.
ಜೈಲಿನಲ್ಲಿರೋ 34 ವರ್ಷದ ನಂದ್ ಲಾಲ್ ಅವರ ಪತ್ನಿ ರೇಖಾ ಅವರು ಸಂತಾನದ ಹಕ್ಕಿನ ಮೇಲೆ ತನ್ನ ಪತಿಯನ್ನು ಬಿಡುಗಡೆ ಮಾಡುವಂತೆ ರಾಜಸ್ಥಾನ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ನ ಜೋಧಪುರ ಪೀಠದ ನ್ಯಾಯಾಧೀಶರಾದ ಸಂದೀಪ್ ಮೆಹ್ತಾ ಮತ್ತು ಫರ್ಜಂದ್ ಅಲಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಸಂತಾನದ ಹಕ್ಕನ್ನು ಉಲ್ಲೇಖಿಸಿ, ರೇಖಾ ಅವರ ತಾಯ್ತನದ ಆಸೆಗೆ ಗೌರವಿಸಿ ಈ ತೀರ್ಪನ್ನು ನೀಡಿದೆ.
ನ್ಯಾಯಾಧೀಶರು ತಮ್ಮ ಆದೇಶದಲ್ಲಿ ನಂದ್ ಲಾಲ್ ಅವರ ಸಂಗಾತಿಯು ನಿರಪರಾಧಿ ಮತ್ತು ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಆಕೆಯ ಲೈಂಗಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಪುರುಷನು ಪೂರೈಸಬೇಕಾಗಿದೆ. ಅಪರಾಧಿಯ ಸಂಗಾತಿಯು ಸಂತತಿಯನ್ನು ಪಡೆಯುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಠಪಡಿಸಿದೆ.
ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಿದ ಜೀವನದ ಮೂಲಭೂತ ಹಕ್ಕಿಗೆ ಸಂತತಿಯ ಹಕ್ಕನ್ನು ಪ್ರಸ್ತಾಪಿಸುತ್ತಾ, ಕಾನೂನು ಸ್ಥಾಪಿಸಿದ ಕಾರ್ಯವಿಧಾನದ ಪ್ರಕಾರ ಯಾವುದೇ ವ್ಯಕ್ತಿಯ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಾರದು ಎಂದು ಸಂವಿಧಾನವು ಖಾತರಿಪಡಿಸುತ್ತದೆ. ಇದು ತನ್ನ ವ್ಯಾಪ್ತಿಯೊಳಗೆ ಕೈದಿಗಳನ್ನೂ ಒಳಗೊಂಡಿರುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.