ಬೆಂಗಳೂರು: ರಾಜ್ಯ ಸರ್ಕಾರ ವಾಹನ ಮಾಲೀಕರಿಗೆ ಶಾಕ್ ನೀಡಿದೆ. ಬೆಳಗಾವಿಯ (Belagavi) ವಿಧಾನ ಮಂಡಲದ ಅಧಿವೇಶನದಲ್ಲಿ ಅಂಗೀಕಾರಗೊಂಡಿದ್ದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ (2ನೇ ತಿದ್ದುಪಡಿ) ಮಸೂದೆ 2023ಕ್ಕೆ ಶನಿವಾರ ರಾಜ್ಯಪಾಲರ ಅನಮೋದನೆ ದೊರೆತಿದೆ. ಹೀಗಾಗಿ ಜನವರಿ.1ರಿಂದ ಜಾರಿಗೆ ಬರುವಂತೆ ಕರ್ನಾಟಕದಲ್ಲಿ ಮೋಟಾರು ವಾಹನಗಳ ತೆರಿಗೆ ದರ ಹೆಚ್ಚಳವಾಗಲಿದೆ.
ಈ ಸಂಬಂಧ ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದ್ದು, ಅದರಲ್ಲಿ ಕರ್ನಾಟಕ ಮೋಟಾರು ವಾಹನ ತೆರಿಗೆ (ಎರಡನೇ ತಿದ್ದುಪಡಿ) ಮಸೂದೆ 2023ಕ್ಕೆ ರಾಜ್ಯಪಾಲರ ಅನುಮೋದನೆ ದೊರೆತಿದೆ. ಇದರೊಂದಿಗೆ ಜನವರಿ.1ರಿಂದ ರಾಜ್ಯದಲ್ಲಿ ಎಲ್ಲಾ ರೀತಿಯ ವಾಹನಗಳ ಮೇಲಿನ ತೆರಿಗೆ ಹೆಚ್ಚಳವಾಗಲಿದೆ ಎಂದು ತಿಳಿಸಲಾಗಿದೆ.
ಅಲ್ಲದೆ, ಹೊಸ ಕಾಯಿದೆಯ ಅಡಿಯಲ್ಲಿ ಸರಕು ಸೇವಾ ವಾಹನ, ಶಾಲಾ ಒಡೆತದನ ವಾಹನಗಳು, ಕ್ಯಾಬ್ ಗಳು, ಎಲೆಕ್ಟ್ರಿಕ್ ವಾಹನಗಳ ನೋಂದಣಿ ತೆರಿಗೆಯಲ್ಲಿ ಭಾರೀ ಹೆಚ್ಚಳವಾಗಲಿದೆ.
ಸರಕು ವಾಹನಗಳನ್ನು ಅವುಗಳ ತೂಕ-ಸಾಗಿಸುವ ಸಾಮರ್ಥ್ಯದ ಪ್ರಕಾರ 1,500 ಕೆಜಿಯಿಂದ 9,500 ಕೆಜಿಯವರೆಗೆ ತೆರಿಗೆಯು 20,000 ದಿಂದ 80,000ವರೆಗೆ ವರ್ಗೀಕರಿಸಲಾಗಿದೆ. ಸರಕು ಸಾಗಾಣೆ ವಾಹನಗಳು ಮತ್ತು ಕ್ಯಾಬ್ ವಾಹನಗಳಿಗೆ ಜೀವಿತಾವಧಿ ತೆರಿಗೆ ವಿಧಿಸುವುದನ್ನು ಹಿಂಪಡೆದು, ಈ ಮೊದಲಿನಂತೆ ತ್ರೈ ಮಾಸಿಕ ಅವಧಿಯಲ್ಲಿ ತೆರಿಗೆ ಸಂಗ್ರಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ.