ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿ ಬಳಿಯ ಸುಂದರ ಗ್ರಾಮ ಮುಡಾರು. ಕಾರ್ಕಳ, ಕಳಸವನ್ನಾಳಿದ ಭೈರವರಸನ ಆಳ್ವಿಕೆಗೆ ಒಳಪಟ್ಟಿದ್ದ ಈ ಊರು ಸರ್ವಧರ್ಮೀಯರ ಸಮನ್ವಯದ ಕೇಂದ್ರವೂ ಹೌದು. ಇದಕ್ಕೆ ಕಿರಿಟ ಪ್ರಾಯದಂತೆ ಇಲ್ಲಿನ ಭಗವಾನ್ ಶ್ರೀ1008 ಅನಂತನಾಥ ಸ್ವಾಮಿ ಬಸದಿ ಅತ್ಯಂತ ಮನೋಹರವಾಗಿದೆ.
ಭೈರವರಸರಿಂದ ವಿಶೇಷ ಮನ್ನಣೆಯನ್ನು ಪಡೆದಿದ್ದ ಇಲ್ಲಿನ ಸುಮ್ಮ ಅಪ್ಪಾಯಿ ಮನೆತನದವರಿಂದ, ಭೈರವರಸರ ಕಾಲದಲ್ಲಿ ನಿರ್ಮಿಸಲ್ಪಟ್ಟಿರುವ ಈ ಬಸದಿಯಲ್ಲಿ ಭಗವಾನ್ ಶ್ರೀ 1008 ಅನಂತನಾಥ ಸ್ವಾಮಿಯ ಸುಂದರವಾದ ಜಿನಬಿಂಬವಿದೆ.
ಗ್ರಾಮದ ಶ್ರಾವಕರಿಂದಲೂ ಪೂಜಿಸಲ್ಪಡುವ ಈ ಜಿನಬಿಂಬದ ಜೊತೆಗೆ ಬಸದಿಯ ಆವರಣದಲ್ಲಿ ಮಾತೆ ಶ್ರೀ ಪದ್ಮಾವತೀ ದೇವಿಯ ಸುಂದರವಾದ ಆಲಯವೂ ಇದೆ . ಹಾಗೆಯೇ ಕ್ಷೇತ್ರಪಾಲ ನಾಗಸನ್ನಿಧಿಯನ್ನೂ ನಾವು ಕಾಣಬಹುದು.
ಹಾಗೆಯೇ ಇಲ್ಲಿರುವ ಅತ್ಯಂತ ಪ್ರಾಚೀನ ಜಿನಬಿಂಬಗಳು ಅವುಗಳಲ್ಲಿರುವ ಶಾಸನಗಳು ಇಲ್ಲಿನ ಗತ ಇತಿಹಾಸವನ್ನು ಸಾರಿ ಹೇಳುತ್ತಿವೆ. ಕಾರ್ಕಳ ,ಕಳಸ, ವೇಣೂರು, ಧರ್ಮಸ್ತಳ, ವರಂಗ, ಶಿರ್ಲಾಲು ಕ್ಷೇತ್ರಗಳಿಗೆ ಈ ಮೂಲಕವೇ ದಾರಿಯಾಗಿರುವುದರಿಂದ ಅನೇಕ ತ್ಯಾಗಿಗಳ ಸಂಘಗಳು ಈ ಕ್ಷೇತ್ರದಲ್ಲಿ ತಂಗಿ ಮುಂದೆ ವಿಹಾರಗೈಯುತ್ತವೆ.
ಪ್ರಾಚೀನ ಇತಿಹಾಸದೊಂದಿಗೆ ಕಂಗೊಳಿಸುತ್ತಿರುವ ಈ ಬಸದಿಯು ಮೇಲ್ಚಾವಣಿ ತಾಮ್ರದ ಹೊದಿಕೆಯನ್ನು ಹೊಂದಿದ್ದು, ಕಾಲ ಕಾಲಕ್ಕೆ ಜೀರ್ಣೋದ್ಧಾರ ಕಾರ್ಯಗಳು, ಧಾಮ ಸಂಪ್ರೋಕ್ಷಣೆಗಳು ನೆರವೇರಿಕೊಂಡು ಬಂದಿವೆ.
ಸದಾ ಧಾರ್ಮಿಕ ಚಟುವಟಿಕೆಯ ಕೇಂದ್ರವಾಗಿರುವ ಈ ಬಸದಿಯು ಪ್ರಸ್ತುತ ಜೀರ್ಣಾವಸ್ಥೆಗೆ ತಲುಪಿದ್ದು ಪುನರುದ್ಧಾರ ಮಾಡಬೇಕೆಂದು ಆಶಯ ನಮ್ಮೆಲ್ಲರದ್ದು. ಜೀರ್ಣವಾಗಿರುವ ತಾಮ್ರದ ಹೊದಿಕೆಯ ದುರಸ್ತಿ, ಗರ್ಭಗುಡಿಯ ದುರಸ್ತಿ, ಬಸದಿಯ ಒಳ ಹೊರಭಾಗವನ್ನು ಶಿಲಾಮಯಗೊಳಿಸುವುದು. ಕಲ್ಲಿನ ಕಂಬದ ಅಳವಡಿಕೆ, ಬಸದಿಯ ಸುತ್ತಲೂ ನೆಲಹಾಸು ಅಳವಡಿಕೆ, ಹೀಗೆ ಸುಮಾರು 88 ಲಕ್ಷ ರೂಪಾಯಿ ವೆಚ್ಚದಲ್ಲಿ ಬಸದಿಯ ಜೀರ್ಣೋದ್ಧಾರವನ್ನು ಮಾಡಬೇಕೆಂದು ಸಂಕಲ್ಪ ನಮ್ಮದು.
ಬಸದಿಯ ಜೀರ್ಣೋದ್ಧಾರದೊಂದಿಗೆ ಮುಂದಿನ ಹಂತದಲ್ಲಿ ಅತಿ ಅವಶ್ಯಕವಾಗಿರುವ ತ್ಯಾಗಿ ನಿವಾಸ, ಸ್ವಾಧ್ಯಯ ಕಕ್ಷೆ, ಒಂದು ಸುಸಜ್ಜಿತವಾದ ಗ್ರಂಥಾಲಯ, ಅಡುಗೆ ಕೋಣೆ, ಯಾತ್ರಿ ನಿವಾಸ, ಸಭಾಭವನದ ನಿರ್ಮಾಣದ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಈ ಮಹತ್ಕಾರ್ಯದಲ್ಲಿ ಧರ್ಮಾಭಿಮಾನಿಗಳಾದ ತಾವು ತನು – ಮನ – ಧನದ ಸಹಕಾರವನ್ನು ನೀಡುವುದರೊಂದಿಗೆ , ಪುಣ್ಯಭಾಗಿಗಳಾಗಬೇಕಾಗಿ ವಿನಮ್ರದಿಂದ ವಿನಂತಿಸಿಕೊಳ್ಳುತ್ತಿದ್ದೇವೆ .
ಜೀರ್ಣೋದ್ಧಾರ ಸಮಿತಿ, ಅಪ್ಪಾಯಿ ಬಸದಿ ಮುಡಾರು ಗ್ರಾಮ, ಬಜಗೋಳಿ ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9967055469, 9343289076