ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರ.
ಅಸೆಂಬ್ಲಿ ಎಲೆಕ್ಷನ್ ಕ್ಷೇತ್ರ ಸಮೀಕ್ಷೆ – ಯಾರ್ ಗೆಲ್ತಾರೆ..? ಇವತ್ತು ನಾವು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರ. ಸಾವಿರ ಕಂಬಗಳ ಬಸದಿ ಇರುವ ಮೂಡುಬಿದಿರೆ ಜೈನಕಾಶಿ ಎಂದೇ ಚಿರಪರಿಚಿತ.
ಕಾಂಗ್ರೆಸ್ ಭದ್ರಕೋಟೆ:
ಕರಾವಳಿ ಜಿಲ್ಲೆ ಬಿಜೆಪಿಯ ಭದ್ರಕೋಟೆ ಎಂಬ ವ್ಯಾಖ್ಯಾನಕ್ಕೂ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳ ಫಲಿತಾಂಶದ ಇತಿಹಾಸಕ್ಕೂ ಹೊಂದಾಣಿಕೆಯೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬರುವ ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಕೂಡಾ ಬಿಜೆಪಿ ಭದ್ರಕೋಟೆಯೇನಲ್ಲ. ಇಲ್ಲಿ ಬಿಜೆಪಿ ಗೆದ್ದಿರುವುದು ಒಂದು ಬಾರಿಯಷ್ಟೇ, ಅದೂ ಕಳೆದ ಸಲ.
ದಿವಂಗತ ಅಮರನಾಥ್ ಶೆಟ್ಟಿ
ಜನಪ್ರಿಯ ರಾಜಕೀಯ ನೇತಾರರಾಗಿದ್ದ ಅಮರನಾಥ್ ಶೆಟ್ಟಿಯವರು 2 ಬಾರಿ ಜನತಾ ಪಾರ್ಟಿಯಿಂದಲೂ ಮತ್ತೊಂದು ಬಾರಿ ಜನತಾದಳದಿಂದಲೂ ಗೆದ್ದಿದ್ದರು. ಉಳಿದಂತೆ ಒಟ್ಟು 11 ಬಾರಿ ನಡೆದಿರುವ ಚುನಾವಣೆಯಲ್ಲಿ 8 ಬಾರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸೇ ಗೆದ್ದಿದೆ.
ಮಾಜಿ ಸಚಿವ ಅಭಯ್ಚಂದ್ರ ಜೈನ್
ಸಿದ್ದರಾಮಯ್ಯ ಸರ್ಕಾರದಲ್ಲಿ ಮೀನುಗಾರಿಕೆ, ಯುವಜನ ಮತ್ತು ಕ್ರೀಡಾ ಸಚಿವರಾಗಿದ್ದ ಅಭಯಚಂದ್ರ ಜೈನ್ ದೀರ್ಘಕಾಲದವರೆಗೆ ಈ ಕ್ಷೇತ್ರದ ಶಾಸಕರಾಗಿದ್ದರು. 1999ರಿಂದ 2018ರವರೆಗೆ ಸತತ ಐದು ಬಾರಿ ಕಾಂಗ್ರೆಸ್ ಶಾಸಕರಾಗಿ ಈ ಕ್ಷೇತ್ರದಿಂದ ಆಯ್ಕೆ ಆಗಿದ್ದರು. ನಿರಂತರವಾಗಿ 19 ವರ್ಷ ಈ ಕ್ಷೇತ್ರ ಕೈ ಹಿಡಿತದಲ್ಲಿತ್ತು.
ರಾಜಕಾರಣದತ್ತ ಸುಳಿಯದ ಮಕ್ಕಳು: ಅಭಯ್ಚಂದ್ರ ಜೈನ್ ಮಾದರಿ:
2018ರಲ್ಲೇ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲ್ಲ ಎಂದಿದ್ದರು ಮಾಜಿ ಸಚಿವ ಅಭಯಚಂದ್ರ ಜೈನ್. ತಮ್ಮ ಬದಲು ದಕ್ಷಿಣ ಕನ್ನಡ ಜಿಲ್ಲೆಯ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಅವರಿಗೆ ಟಿಕೆಟ್ ಕೊಡಿ ಎನ್ನುವುದು ಅವರ ಸಲಹೆ ಆಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಟಿಕೆಟ್ ಗೊಂದಲದಿAದ ಅಭಯಚಂದ್ರ ಜೈನ್ ಮತ್ತೆ ಚುನಾವಣೆಗೆ ನಿಲ್ಲಬೇಕಾಯಿತು, ಆ ಚುನಾವಣೆಯಲ್ಲಿ ಸೋತರು ಕೂಡಾ.
ತಮ್ಮ ಮಕ್ಕಳನ್ನೂ ರಾಜಕಾರಣದಿಂದ ದೂರ ಇಟ್ಟಿರುವ ಮಾಜಿ ಸಚಿವ ಅಭಯಚಂದ್ರ ಜೈನ್ `ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ, ಯುವಕರಿಗೆ ಟಿಕೆಟ್ ಕೊಡಬೇಕು. ಮಿಥುನ್ ರೈಗೆ ಟಿಕೆಟ್ ಕೊಟ್ಟರೆ ಕ್ಷೇತ್ರದಲ್ಲಿ ಪಕ್ಷ ಗೆದ್ದೇ ಗೆಲ್ಲುತ್ತೆ’ ಎಂಬ ವಿಶ್ವಾಸದಲ್ಲಿದ್ದಾರೆ. ತಾವಲ್ಲದೇ ತಮ್ಮ ಮಕ್ಕಳನ್ನೂ ರಾಜಕೀಯವಾಗಿ ಬೆಳೆಸಿ ಅವರನ್ನೂ ಮಂತ್ರಿಗಳನ್ನಾಗಿ ಮಾಡಬೇಕೆಂಬ ರಾಜಕೀಯ ನಾಯಕರ ಪೈಕಿ ಅಭಯ್ ಚಂದ್ರ ಜೈನ್ ಭಿನ್ನವಾಗಿ ನಿಲ್ಲುತ್ತಾರೆ.
ಯುವ ನಾಯಕ ಮಿಥುನ್ ರೈ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ :
ಈ ಬಾರಿ ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಿಂದ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಮಿಥುನ್ ರೈ ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತ. ತಳಮಟ್ಟದಿಂದಲೇ ಪಕ್ಷ ಸಂಘಟನೆಯ ಕ್ಷೇತ್ರದಲ್ಲೂ ಜನರಿಗೆ ಚಿರಪರಿಚಿತರಾಗಿರುವ ಮಿಥುನ್ ರೈ ಕರಾವಳಿಯಲ್ಲಿ ಕಾಂಗ್ರೆಸ್ಗೆ ಭರವಸೆ ಮೂಡಿಸಿರುವ ಯುವ ಮುಖ.
ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಇವರು 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳೀನ್ ಕುಮಾರ್ ಕಟೀಲ್ ಅವರ ಎದುರು ಸೋತಿದ್ದರು.
ಕಳೆದ ವರ್ಷ ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮಿಥುನ್ ರೈ ಅವರು ಸ್ಪರ್ಧೆ ಮಾಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಸೂಚನೆ ಮೇರೆಗೆ ನಾಮಪತ್ರವನ್ನು ವಾಪಸ್ ತೆಗೆದುಕೊಂಡಿದ್ದರು. ಆಗ ಅವರಿಗೆ ವಿಧಾನಸಭಾ ಚುನಾವಣೆ ಟಿಕೆಟ್ ನೀಡುವ ಭರವಸೆಯನ್ನು ನೀಡಲಾಗಿತ್ತು. ಈ ಬಾರಿ ಯುವ ಮುಖ, ಬಂಟ ಸಮುದಾಯದ ಮಿಥುನ್ ರೈಗೆ ಟಿಕೆಟ್ ನೀಡಿದರೆ ಗೆದ್ದೇ ಗೆಲ್ಲುತ್ತೇವೆ ಎಂಬ ನಿರೀಕ್ಷೆಯಲ್ಲಿದೆ ಕಾಂಗ್ರೆಸ್.
ಬಿಜೆಪಿ ಒಡೆದ ಮನೆ: ಶಾಸಕರ ವಿರುದ್ಧವೇ ಅಸಮಾಧಾನ
ಇನ್ನು ಬಿಜೆಪಿ ವಿಷಯಕ್ಕೆ ಬರುವುದಾದ್ರೆ 2018ರಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಉಮಾನಾಥ್ ಕೋಟ್ಯಾನ್ ಈ ಕ್ಷೇತ್ರದ ಶಾಸಕರು. 2018ರಲ್ಲಿ ಅಭಯಚಂದ್ರ ಜೈನ್ ಅವರ ವಿರುದ್ಧ 30,209 ಮತಗಳಿಂದ ಪ್ರಚಂಡ ಜಯಗಳಿಸಿದ್ದರು.
2013ರಲ್ಲಿ ಉಮಾನಾಥ್ ಕೋಟ್ಯಾನ್ ಅವರು ಬಿಜೆಪಿಯಿಂದ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ 4,550 ಮತಗಳಿಂದ ಸೋತಿದ್ದರು. 2008ರಲ್ಲಿ ಜೈನ ಸಮುದಾಯದ ಕೆ ಜಗದೀಶ್ ಅಧಿಕಾರಿ ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸಿ 9,903 ಮತಗಳಿಂದ ಅಭಯ ಚಂದ್ರ ಜೈನ್ ಅವರ ವಿರುದ್ಧ ಸೋತಿದ್ದರು.
ಜನರಲ್ಲಿ ಶಾಸಕರ ಬಗ್ಗೆ ಅಷ್ಟೊಂದು ಅಸಮಾಧಾನ ಇಲ್ಲವಾದರೂ ಕೂಡಾ ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಒಡೆದ ಮನೆ ಆಗಿದೆ. ಶಾಸಕ ಉಮಾನಾಥ್ ಕೋಟ್ಯಾನ್ ವಿರುದ್ಧವೇ ಬಿಜೆಪಿಯ ವಿರೋಧಿ ಬಣ ಬಲಗೊಳ್ಳುತ್ತಿದೆ. ಬಿಜೆಪಿ ಕಾರ್ಯಕರ್ತರನ್ನು ಶಾಸಕರು ಕಡೆಗಣಿಸುತ್ತಿದ್ದಾರೆ ಎಂಬ ಸಿಟ್ಟು ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರಲ್ಲಿದೆ.
BJP ಶಾಸಕ ಉಮಾನಾಥ್ ಕೋಟ್ಯಾನ್
ಉದಾಹರಣೆಗೆ ಮೂಡುಬಿದಿರೆ ಪುರಸಭಾ ಚುನಾವಣೆಯಲ್ಲಿ ತಮ್ಮದೇ ಪಕ್ಷದ ಶಾಸಕರನ್ನು ಹೆಸರೇ ಹೇಳದೇ ಪ್ರಚಾರ ನಡೆಸಿದ್ದ ಗೆದ್ದಿದ್ದ ಪ್ರಸಾದ್ ಭಂಡಾರಿ ಅವರನ್ನು ಪುರಸಭೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಇವರು ಶಾಸಕರ ವಿರೋಧಿ ಬಣ ಎಂದೇ ಕರೆಸಿಕೊಳ್ಳುತ್ತಿರುವ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಇವರ ಬಣದವರು.
ಈ ಬಾರಿ ಸುದರ್ಶನ್ ಮೂಡುಬಿದಿರೆ ಬಿಜೆಪಿ ಅಭ್ಯರ್ಥಿನಾ..?
ಬಿಜೆಪಿ ವಲಯದ ಮಾಹಿತಿ ಪ್ರಕಾರ ಈ ಬಾರಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಉಮಾನಾಥ್ ಕೋಟ್ಯಾನ್ ಅವರಿಗೆ ಟಿಕೆಟ್ ಕೈ ತಪ್ಪಬಹುದು ಎನ್ನಲಾಗುತ್ತಿದೆ. ಉಮಾನಾಥ್ ಕೋಟ್ಯಾನ್ ಅವರ ಬದಲು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿರುವ ಸುದರ್ಶನ್ ಮೂಡುಬಿದಿರೆ ಇವರನ್ನು ಪಕ್ಷ ಕಣಕ್ಕಿಳಿಸಬಹುದು ಎನ್ನಲಾಗ್ತಿದೆ. 2023ರಲ್ಲಿ ಬಿಜೆಪಿ ಹೊಸ ಅಭ್ಯರ್ಥಿಯನ್ನು ಕ್ಷೇತ್ರದಲ್ಲಿ ಕಣಕ್ಕಿಳಿಸುವ ಬಗ್ಗೆ ಯೋಚಿಸುತ್ತಿದೆ. ಸುದರ್ಶನ್ ಮೂಡುಬಿದಿರೆ ಮತ್ತು ಉಮಾನಾಥ್ ಕೋಟ್ಯಾನ್ ಇಬ್ಬರೂ ಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳನ್ನು ಹೊಂದಿರುವ ಬಿಲ್ಲವ ಸಮುದಾಯಕ್ಕೆ ಸೇರಿದವರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ
ಸುದರ್ಶನ್ ಅವರ ತಾಯಿ ಈ ಹಿಂದೆ ಜೆಡಿಎಸ್ನಿಂದ ಪುರಸಭೆ ಕೌನ್ಸಿಲರ್ ಆಗಿದ್ದರು. ಸುದರ್ಶನ್ ಅವರ ಪರಿವಾರದವರು ಜೆಡಿಎಸ್ ನಾಯಕರಾಗಿದ್ದ ಅಮರನಾಥ್ ಶೆಟ್ಟಿಯವರ ಬೆಂಬಲಿಗರಾಗಿದ್ದರು. ಆದರೆ ಆ ಬಳಿಕ ಕ್ಷೇತ್ರದಲ್ಲಿ ಜೆಡಿಎಸ್ ನೆಲೆ ಕಳೆದುಕೊಳ್ಳುತ್ತಿದ್ದಂತೆ ಸುದರ್ಶನ್ ಅವರು ಸಂಘ ಪರಿವಾರಕ್ಕೆ ಹತ್ತಿರವಾಗಿ ಆ ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷರಾದರು.
ಉಮಾನಾಥ್ ಕೋಟ್ಯಾನ್ ವೈಯಕ್ತಿಕ ವರ್ಚಸ್ಸು:
ಆದರೆ ಕಳೆದ ಬಾರಿ ಮೂಡುಬಿದಿರೆಯಲ್ಲಿ ಬಿಜೆಪಿ ಗೆಲ್ಲಲು ಪಕ್ಷ ಎಷ್ಟು ಮುಖ್ಯವಾಗಿತ್ತೋ ಅಷ್ಟೇ ಮುಖ್ಯವಾಗಿ ಉಮಾನಾಥ್ ಕೋಟ್ಯಾನ್ ಅವರ ವೈಯಕ್ತಿಕ ವರ್ಚಸ್ಸು ಮತ್ತು ಜನರ ನಡುವೆ ಅವರ ಒಡನಾಟವೂ ಕಾರಣವಾಗಿತ್ತು ಎನ್ನುವುದು ಕೋಟ್ಯಾನ್ ಬಣದ ವಾದ. ಕಳೆದ ಬಾರಿ ಚುನಾವಣಾ ಮತ ಎಣಿಕೆಯಂದು ಬಿಜೆಪಿಗೆ ಮೊದಲ ಸಿಹಿ ಸುದ್ದಿ ಸಿಕ್ಕಿದ್ದೇ ಈ ಕ್ಷೇತ್ರದಿಂದ ಎನ್ನುವುದು ವಿಶೇಷ.
ಇತ್ತ ಮೂಲ್ಕಿ ಭಾಗದ ಬಿಜೆಪಿ ಕಾರ್ಯಕರ್ತರು ಮತ್ತು ಪ್ರಭಾವಿ ನಾಯಕರು ಮಂಡಲ ಅಧ್ಯಕ್ಷ ಸುನಿಲ್ ಆಳ್ವ ಅವರಿಗೆ ಪಕ್ಷದ ಟಿಕೆಟ್ ಕೊಡಬೇಕು ಎಂಬ ಕೂಗು ಎಬ್ಬಿಸಿದ್ದಾರೆ. ಈಶ್ವರ ಕಟೀಲ್, ಕಸ್ತೂರಿ ಪಂಜ ಅವರಿಗೂ ಟಿಕೆಟ್ ಕೊಡಬೇಕು ಎಂಬ ಕೂಗು ಇದೆಯಾದರೂ ಅದು ಜೋರಾಗಿಲ್ಲ.
ಜಾತಿವಾರು ಮತಗಳು:
ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಲ್ಲವರು, ಬಂಟರು, ಕ್ರಿಶ್ಚಿಯನ್ನರು, ಮುಸಲ್ಮಾನರ ಮತಗಳೇ ನಿರ್ಣಾಯಕ.
ಧರ್ಮ ರಾಜಕಾರಣ:
ಕರಾವಳಿ ಬಿಜೆಪಿಯ ಹಿಂದುತ್ವದ ಪ್ರಯೋಗಶಾಲೆ. 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಗಿಂತಲೂ ಹಿಂದೂ ವಿರೋಧಿ ಎಂಬ ಕಳಂಕ ದಕ್ಷಿಣ ಕನ್ನಡದಲ್ಲಿ 8ರಲ್ಲಿ 7 ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿಗೆ ಸಹಾಯ ಮಾಡಿತ್ತು.
ಈ ಬಾರಿಯೂ ಧರ್ಮದ ವಿಷಯಗಳು ಕಳೆದ ಸಲಕ್ಕಿಂತಲೂ ಹೆಚ್ಚು ಉದ್ವಿಗ್ನವಾಗಿವೆ. ಹಿಜಾಬ್, ಹಲಾಲ್ ಕಟ್, ಆಜಾನ್, ಧಾರ್ಮಿಕ ಸ್ಥಳಗಳ ಇತಿಹಾಸವನ್ನು ಕೆದಕಿ ಬಿಜೆಪಿ ಅದನ್ನೇ ಚುನಾವಣಾ ಅಸ್ತçವನ್ನಾಗಿ ಮಾಡಿಕೊಳ್ಳುತ್ತಿದೆ. ಧರ್ಮರಾಜಕಾರಣವನ್ನು ನೆಚ್ಚಿಕೊಂಡು ಗೆದ್ದುಬಿಡುವ ಉಮೇದಿನಲ್ಲಿದೆ ಬಿಜೆಪಿ. ಅದಕ್ಕೆ ಮೂಲ್ಕಿ-ಮೂಡುಬಿದಿರೆ ಕ್ಷೇತ್ರವೂ ಹೊರತಾಗಿಲ್ಲ.
ಬಿಲ್ಲವ ಸಮುದಾಯದ ಸಿಟ್ಟು:
ಆದರೆ ಗಣರಾಜ್ಯೋತ್ಸವದಲ್ಲಿ ಸಮಾಜ ಸುಧಾರಕ ನಾರಾಯಣಗುರುಗಳ ಸ್ತಬ್ಧಚಿತ್ರಕ್ಕೆ ಅನುಮತಿ ನೀಡದೇ ಇರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ ಸಮುದಾಯದ ಆಕ್ರೋಶಕ್ಕೆ ಗುರಿ ಆಗಿತ್ತು. ಆಗ ಬಿಲ್ಲವ ಸಮುದಾಯ ಹಳದಿ ಶಾಲನ್ನು ಧರಿಸಿ ದೊಡ್ಡ ಪ್ರತಿಭಟನಾ ಮೆರವಣಿಗೆಯನ್ನೂ ನಡೆಸಿತ್ತು. ಅದಾದ ಬಳಿಕ ಪಠ್ಯಪುಸ್ತಕದಲ್ಲಿ ನಾರಾಯಣಗುರುಗಳ ಪಠ್ಯವನ್ನು ತೆಗೆದುಹಾಕಿರುವುದು ಬಿಲ್ಲವ ಸಮುದಾಯವನ್ನು ಮತ್ತೆ ಕೆರಳುವಂತೆ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರೂ ಬಿಲ್ಲವ ಸಮುದಾಯದವರೇ. ಕಾರ್ಕಳ ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ಸದ್ಯ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ. ಇವರೂ ಬಿಲ್ಲವ ಸಮುದಾಯದವರು. ಇನ್ನೊಬ್ಬರು ಕೋಟಾ ಶ್ರೀನಿವಾಸಪೂಜಾರಿ ಅವರು ಈ ಹಿಂದೆ ದಕ್ಷಿಣ ಕನ್ನಡ ಉಸ್ತುವಾರಿ ಆಗಿದ್ದರು. ಆದರೆ ಕೋಟಾ ಶ್ರೀನಿವಾಸಪೂಜಾರಿ ಮತ್ತು ಉಮಾನಾಥ್ ಕೋಟ್ಯಾನ್ ನಡುವೆ ಬಹಿರಂಗ ಅಸಮಾಧಾನವೇ ಇದೆ.
ಕಾಂಗ್ರೆಸ್ ಪಾಲಿನ ಅಸ್ತç:
ಬಿಜೆಪಿ ಸರ್ಕಾರವಿದ್ದರೂ ಕ್ಷೇತ್ರದಲ್ಲಿ ಹೇಳಿಕೊಳ್ಳುವ ಕೆಲಸ ಆಗಿಲ್ಲ ಎನ್ನುವುದು ಕಾಂಗ್ರೆಸ್ ವಾದ. ಅಭಯ್ ಚಂದ್ರ ಜೈನ್ ಅವರು ಕೊನೆಯ ಬಾರಿ ಶಾಸಕರಾಗಿದ್ದ ವೇಳೆ ತಂದ ಅನುದಾನವನ್ನೇ ಈಗ ಬಿಜೆಪಿ ಶಾಸಕ ಉಮನಾಥ್ ಕೋಟ್ಯಾನ್ ಅವರು ತಾವೇ ಈ ಅನುದಾನ ತಂದಿದ್ದಾಗಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎನ್ನುವುದು ಕಾಂಗ್ರೆಸ್ ಆರೋಪ.
ಕಾಂಗ್ರೆಸ್ಗೆ ಬಿಜೆಪಿ ಸರ್ಕಾರದ ದುರಾಡಳಿತವೇ ಅಸ್ತç. ಬೆಲೆ ಏರಿಕೆ, ಶೇಕಡಾ 40ರಷ್ಟು ಕಮಿಷನ್, ಗುತ್ತಿಗೆದಾರ ಆತ್ಮಹತ್ಯೆ ಮತ್ತು ಸಚಿವರ ರಾಜೀನಾಮೆ, ಪೊಲೀಸ್ ನೇಮಕಾತಿ ಹಗರಣ ಹೀಗೆ ಬಿಜೆಪಿ ಸರ್ಕಾರದಲ್ಲಿನ ಲೋಪಗಳನ್ನೇ ಮುಂದಿಟ್ಟುಕೊAಡು ಕಾಂಗ್ರೆಸ್ ಜನರ ಬಳಿಗೆ ಹೋಗುತ್ತಿದೆ.