ಮುಂಬೈನ ಕುರ್ಲಾದಲ್ಲಿ ಸೋಮವಾರ ರಾತ್ರಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದ ದುರ್ಘಟನೆಯಲ್ಲಿ ಇಲ್ಲಿಯವರೆಗೆ 19 ಜನ ಮೃತಪಟ್ಟಿದ್ದಾರೆ. ಇತರ ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಹಲವರನ್ನು ಕಟ್ಟಡದ ಅವಶೇಷಗಳಿಂದ ರಕ್ಷಿಸಿದೆ ಮತ್ತು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ತಿಳಿಸಿದೆ.
ಮುಖ್ಯಮಂತ್ರಿ ಆದಿತ್ಯ ಠಾಕ್ರೆ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ಇಲಾಖೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ತಂಡದಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಅವಲೋಕನ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಬಿಎಂಸಿ ನೋಟಿಸ್ಗಳನ್ನು ನೀಡಿದಾಗ, ಕಟ್ಟಡ ಖಾಲಿ ಮಾಡಬೇಕು. ಇಲ್ಲದಿದ್ದರೆ, ಇಂತಹ ದುರ್ಘಟನೆಗಳು ಸಂಭವಿಸುತ್ತವೆ, ಇದು ದುರದೃಷ್ಟಕರ ಎಂದು ಹೇಳಿದ್ದಾರೆ.
ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಮಹಾರಾಷ್ಟ್ರ ಸಚಿವ ಸುಭಾಷ್ ದೇಸಾಯಿ ಹೇಳಿದ್ದಾರೆ.
ಸ್ಥಳೀಯ ಮಾಜಿ ಕಾರ್ಪೊರೇಟರ್ ಪ್ರವೀಣ ಮೊರಜಕರ್ ಮಾತನಾಡಿ, ಕಟ್ಟಡದ ನಿವಾಸಿಗಳು ಮತ್ತು ಇತರ ಮೂವರಿಗೆ ಕಟ್ಟಡವನ್ನು ತೆರವು ಮಾಡುವಂತೆ ನೋಟಿಸ್ ನೀಡಲಾಗಿತ್ತು, ಆದರೆ ಬಾಡಿಗೆಯಲ್ಲಿದ್ದವರು ಬಿಟ್ಟಿರಲಿಲ್ಲ ಎಂದು ಹೇಳಿದ್ದಾರೆ.
ಬಿಎಂಸಿ ಹೆಚ್ಚುವರಿ ಆಯುಕ್ತ ಅಶ್ವಿನಿ ಭಿಡೆ ಅವರು, ಕುಸಿದ ಕಟ್ಟಡ ಶಿಥಿಲಗೊಂಡಿದ್ದು, 2013 ರಿಂದ ಮೊದಲು ದುರಸ್ತಿಗಾಗಿ ಮತ್ತು ನಂತರ ಕಟ್ಟಡವನ್ನು ಕೆಡವಲು ನೋಟಿಸ್ ನೀಡಲಾಗಿತ್ತು ಎಂದು ಹೇಳಿದ್ದಾರೆ.