ಖ್ಯಾತ ಉದ್ಯಮಿ ರತನ್ ಟಾಟಾ ಅವರಿಗೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ರತನ್ ಟಾಟಾರವರಿಗೆ ಇರುವ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿ, ಇಲ್ಲದಿದ್ದರೆ ಟಾಟಾ ಸಮೂಹದ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ಗತಿಯೇ ರತನ್ ಟಾಟಾರವರಿಗೆ ಬರಲಿದೆ ಅಂತ ಪೊಲೀಸರಿಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿದ್ದ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಮುಂಬೈ ಪೊಲೀಸರು, ಕರೆಯ ಜಾಡು ಹಿಡಿಯಲಾಗಿ, ಆ ಕರೆ ಕರ್ನಾಟಕದಿಂದ ಬಂದಿದೆ ಅಂತ ತಿಳಿದುಬಂತು. ಪುಣೆ ನಿವಾಸಿಯೊಬ್ಬ ಹೀಗೆ ಬೆದರಿಕೆ ಕರೆ ಮಾಡಿದ್ದು ಆತ ಎಂಬಿಎ ಮತ್ತು ಇಂಜಿನಿಯರಿಂಗ್ ಪದವೀಧರನೂ ಹೌದು.
ಈತ ಮನೆಯಿಂದ 5 ದಿನಗಳ ಹಿಂದೆ ನಾಪತ್ತೆಯಾಗಿದ್ದು, ಈ ಬಗ್ಗೆ ಆತನ ಪತ್ನಿ ಮಿಸ್ಸಿಂಗ್ ಕಂಪ್ಲೇಂಟ್ ಕೂಡ ದಾಖಲಿಸಿದ್ದರು. ಇನ್ನು ಬಂಧಿತ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು ಆತ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾನೆ ಅಂತ ಆತನ ಕುಟುಂಬಸ್ಥರು ತಿಳಿಸಿದ್ದಾರೆ.
ಇನ್ನು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು, ಈ ಕೃತ್ಯದ ಹಿಂದೆ ಯಾವ ಉದ್ದೇಶವಿತ್ತು ಅನ್ನೋ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.