ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀಗಳು, ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಮಠಕ್ಕೆ ಆಗಮಿಸಿದ್ದಾರೆ.
ಮಠದ ಆವರಣದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ಬಂದಿರುವ ಸಂಕಟವನ್ನು ಧೈರ್ಯವಾಗಿ ಎದುರಿಸುತ್ತೇನೆ. ಈ ನೆಲದ ಕಾನೂನನ್ನು ಗೌರವಿಸಬೇಕುಯಾವುದೇ ಪಲಾಯನವಾದವಿಲ್ಲ. ಸಮಸ್ಯೆ ನಿವಾರಣೆ ಮಾಡುವ ಪ್ರಯತ್ನ ಮಾಡುತ್ತೇನೆ. ಇದು ಸಂಕಷ್ಟದ ಸಮಯವಾಗಿದೆ. ಯಾರಿಗೂ ಆತಂಕ ಬೇಡ. ಎಲ್ಲರೂ ಧೈರ್ಯ ಸಹನೆಯಿಂದ ಇರಿ ಎಂದು ಮನವಿ ಮಾಡಿಕೊಂಡರು.
ಇದನ್ನೂ ಓದಿ : ಮಠದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ಮುರುಘಾ ಶರಣರ ವಿರುದ್ಧ FIR – ಮುರುಘಾ ಸ್ವಾಮೀಜಿ A1 ಆರೋಪಿ
ಬುದ್ಧಿವಂತಿಕೆಯಿಂದ ಸಮಸ್ಯೆ ಎದುರಿಸಬೇಕಾಗಿದೆ. ಇದಕ್ಕೆ ಮಠದ ಭಕ್ತರು ಸಹಕರಿಸಬೇಕು. ಮಠದ ಒಳಗೆ ನಡೆಯುತ್ತಿದ್ದ ಪಿತೂರಿ ಈಗ ಹೊರಗೆ ಬಂದಿದೆ. ಇಂತಹ ಸಂದರ್ಭಗಳು ನಮಗೆ ಬಂದಿದ್ದು ಇದೇ ಮೊದಲೇನು ಅಲ್ಲ. ಹೀಗಾಗಿ ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಶ್ರೀಗಳು ತಿಳಿಸಿದರು.
ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಮುರುಘಾ ಮಠದ ಶ್ರೀಗಳು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಶ್ರೀಗಳ ವಿರುದ್ಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಮೈಸೂರಿನ ಒಡನಾಡಿ ಸಂಸ್ಥೆ ಮೂಲಕ ಇಬ್ಬರು ಬಾಲಕಿಯರು ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ನೀಡಿದ್ದಾರೆ.
ಇದನ್ನೂ ಓದಿ : ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ಗೆ ತಿರುವು – ಆಡಳಿತಾಧಿಕಾರಿ ವಿರುದ್ಧ ದೂರು