ADVERTISEMENT
ಬಾಗಲಕೋಟೆ ಜಿಲ್ಲೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರದ ಕೆರೂರು ಪಟ್ಟಣದಲ್ಲಿ ಕೆಲ ದಿನಗಳ ಹಿಂದೆ ಕೋಮು ಸಂಘರ್ಷ ನಡೆದಿತ್ತು. ಈ ಗಲಭೆಯಲ್ಲಿ ಗಾಯಗೊಂಡವರನ್ನು ಇಂದು ಸಿದ್ದರಾಮಯ್ಯನವರು ಭೇಟಿಯಾಗಲು ಆಸ್ಪತ್ರೆಗೆ ತೆರಳಿದ್ದರು.
ಈ ವೇಳೆ ಮುಸ್ಲಿಂ ಮಹಿಳೆಗೆ ಸಿದ್ದರಾಮಯ್ಯನವರು ಒತ್ತಾಯ ಮಾಡಿ ಹಣ ನೀಡಿದ್ದರು. ಆದರೆ, ಆ ಮಹಿಳೆ 2 ಲಕ್ಷ ರೂ.ಹಣವನ್ನು ವಾಪಾಸು ಎಸೆದಿದ್ದರು. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿದ್ದಾರೆ. ಮಹಿಳೆಯ ನೋವನ್ನು ಅರ್ಥ ಮಾಡಿಕೊಳ್ಳಬಲ್ಲೆ. ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಗಲಭೆಯಲ್ಲಿ ಗಾಯಗೊಂಡವರ ಕುಟುಂಬಕ್ಕೆ ವೈಯಕ್ತಿಕ ಪರಿಹಾರ ರೂಪದಲ್ಲಿ ಒಂದಷ್ಟು ಹಣ ನೀಡಿದ್ದೆ. ಹಣ ಬೇಡ, ನ್ಯಾಯ ಕೊಡಿ ಎಂದು ನೊಂದ ಕುಟುಂಬದವರು ಕೇಳಿದ್ದಾರೆ. ಅವರ ನೋವನ್ನು ಅರ್ಥಮಾಡಿಕೊಳ್ಳಬಲ್ಲೆ. ನಿಷ್ಪಕ್ಷಪಾತ ತನಿಖೆ ನಡೆಸಿ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸುವುದು ರಾಜ್ಯ ಬಿಜೆಪಿ ಸರ್ಕಾರದ ಕರ್ತವ್ಯವಾಗಿದೆ.
ರಾಜ್ಯದಲ್ಲಿನ ಶಾಂತಿ ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕೆಟ್ಟುಹೋಗುತ್ತಿದ್ದು ಅನ್ಯಾಯ-ದೌರ್ಜನ್ಯಗಳಿಗೆ ಬಲಿಯಾಗಿರುವ ಜನರು ಪೊಲೀಸರ ನಿಷ್ಕ್ರೀಯತೆಯಿಂದಾಗಿ ಹತಾಶರಾಗಿದ್ದಾರೆ. ಅಸಮರ್ಥ ಗೃಹಸಚಿವರ ಬೇಜವಾಬ್ದಾರಿ ಹೇಳಿಕೆಗಳಿಂದಾಗಿ ಪೊಲೀಸ್ ಇಲಾಖೆ ನೈತಿಕ ಸ್ಥೈರ್ಯವನ್ನು ಕಳೆದುಕೊಂಡಿದೆ.
ಉದ್ರಿಕ್ತ ಸ್ಥಿತಿಯಲ್ಲಿ ಭೇಟಿ ನೀಡುವುದು ಸೂಕ್ತ ಅಲ್ಲವೆಂದು ತಿಳಿದು ಕೆಲವು ದಿನಗಳ ನಂತರ ಇಂದು ಬಂದು ಎರಡೂ ಗುಂಪಿನವರನ್ನು ಭೇಟಿ ಮಾಡಿದೆ. ಇಂತಹ ಘಟನೆಗಳಲ್ಲಿ ಅನವಶ್ಯಕವಾಗಿ ಪ್ರಚೋದನೆ ನೀಡಿ ಶಾಂತಿ-ಸೌಹಾರ್ದತೆ ಕೆಡಿಸುವ ಕೆಲಸವನ್ನು ಯಾರೂ ಮಾಡಬಾರದು.
ಬಾಗಲಕೋಟೆಯ ಕೆರೂರ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದ್ದ ಗಲಭೆಯಲ್ಲಿ ಗಾಯಗೊಂಡವರು ಮತ್ತು ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದೆ. ಘಟನೆಯ ಸುದ್ದಿ ಗೊತ್ತಾದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠರ ಜೊತೆ ಮಾತನಾಡಿ ಗಲಭೆಕೋರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕೆಂದು ತಿಳಿಸಿದ್ದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹೇಳಿದ್ದಾರೆ.
ADVERTISEMENT