ಮೈಸೂರು-ಕೊಳ್ಳೇಗಾಲ ರಸ್ತೆಯ ಪಿಂಜರಾಪೋಲ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ.
ಮೃತರು ಬಳ್ಳಾರಿಯಿಂದ ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದರು. ಮೃತರನ್ನು ಬಳ್ಳಾರಿ ಜಿಲ್ಲೆಯ ಸಂಗನಕಲ್ಲಿ ಗ್ರಾಮದವರು ಎಂದು ಗುರುತಿಸಲಾಗಿದೆ.
ಮಲೆಮಹದೇಶ್ವರ ಬೆಟ್ಟದ ದರ್ಶನ ಮುಗಿಸಿಕೊಂಡು ವಾಪಸ್ಸಾಗ್ತಿದ್ದ ವೇಳೆ ಕೊಳ್ಳೇಗಾಲದ ಕಡೆಗೆ ಹೋಗ್ತಿದ್ದ ಖಾಸಗಿ ಬಸ್ಗೆ ಕಾರು ಡಿಕ್ಕಿ ಹೊಡೆದಿದೆ.
ಖಾಸಗಿ ಬಸ್ಗೆ ವೇಗವಾಗಿ ಹೋಗ್ತಿದ್ದ ಕಾರು ಡಿಕ್ಕಿ ಹೊಡೆದಿದ್ದೇ ದುರಂತಕ್ಕೆ ಕಾರಣ. ಮೃತಪಟ್ಟವರಲ್ಲಿ ಶ್ರೀರಂಗಪಟ್ಟಣದ ಕಾರು ಚಾಲಕ ಆದಿತ್ಯ ಎಂಬವರು ಕೂಡಾ ಸೇರಿದ್ದಾರೆ.
ಮೃತಪಟ್ಟವರಲ್ಲಿ ನಾಲ್ವರು ಪುರುಷರು ಮತ್ತು ಮೂವರು ಮಹಿಳೆಯರು, ಮೂವರು ಮಕ್ಕಳು ಸೇರಿದ್ದಾರೆ.
ಕಾರು ಅಪಘಾತದ ಲೈವ್ ದೃಶ್ಯ ಲಭ್ಯ:
ಖಾಸಗಿ ಬಸ್ಗೆ ಇನ್ನೋವಾ ಕಾರು ಡಿಕ್ಕಿ ಹೊಡೆದಿರುವ ಲೈವ್ ದೃಶ್ಯ ಇನ್ನೋವಾ ಕಾರಿನ ಡ್ಯಾಶ್ಬೋರ್ಡ್ನಲ್ಲಿ ದಾಖಲಾಗಿದೆ. ಕೆಎ 01 ಎಡಿ 5184 ಸಂಖ್ಯೆ ಇನ್ನೋವಾ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆಯುವುದಕ್ಕೂ ಕೆಲವೇ ಸೆಕೆಂಡ್ ಮೊದಲು ಕಾರು ಎಡಗಡೆಯಿಂದ ಕೊಂಚ ಬಲಗಡೆಗೆ ಬಂದು ಎದುರಿಗೆ ಬರ್ತಿದ್ದ ಬಸ್ಗೆ ಡಿಕ್ಕಿ ಹೊಡೆದಿದೆ.
ಸಿಎಂ ಸಿದ್ದರಾಮಯ್ಯ ಸಂಕಟ, ಪರಿಹಾರ ಘೋಷಣೆ:
ಅಪಘಾತದ ಬಗ್ಗೆ ಸಂಕಟ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ ಅವರು ಮೃತರ ಕುಟುಂಬಕ್ಕೆ ಪರಿಹಾರ ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮೈಸೂರು ಜಿಲ್ಲೆಯ ತಿ.ನರಸೀಪುರ ಬಳಿ ಸಂಭವಿಸಿದ ಅಪಘಾತದಲ್ಲಿ 10 ಮಂದಿ ಸಾವಿಗೀಡಾದ ಸುದ್ದಿ ಕೇಳಿ ಸಂಕಟವಾಯಿತು. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ದುರ್ಘಟನೆಯಲ್ಲಿ ಸಾವಿಗೀಡಾದವರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ರೂ. 2 ಲಕ್ಷ ಪರಿಹಾರ ನೀಡಲಾಗುವುದು. ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ.