ಮೈಸೂರು: ಹೊಸವರ್ಷ ಆಚರಣೆ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಡಿ. 31ರ ಸಂಜೆ 7 ಗಂಟೆಯ ನಂತರ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾತ್ರಿ 9ಕ್ಕೆ ತಾವರೆಕಟ್ಟೆ ಗೇಟ್ ಬಂದ್ ಆಗಲಿದ್ದು, ಚಾಮುಂಡಿ ಬೆಟ್ಟದಲ್ಲಿ ವಾಸಿಸುವ ಜನರಿಗೆ ಇದು ಅನ್ವಯಿಸುವುದಿಲ್ಲ ಎಂದ ಅವರು, ಹೊಸ ವರ್ಷ ಆಚರಣೆಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಾರಿ ಮೈಸೂರಿನಲ್ಲಿ ಹೊಸ ವರ್ಷ ಆಚರಣೆಗೆ ರಾತ್ರಿ 1 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ರಾಜ್ಯ ಸರ್ಕಾರ ನಿಗದಿಪಡಿಸಿರುವ ಸಮಯ ಪಾಲನೆ ಮಾಡಬೇಕು. ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್, ಹೋಂ ಸ್ಟೇಗಳು ಮಾಲ್ಗಳಲ್ಲಿ ರಾತ್ರಿ 1 ಗಂಟೆಗೆ ಹೊಸ ವರ್ಷ ಸಂಭ್ರಮಾಚರಣೆ ಮುಗಿಸಬೇಕು ಎಂದರು.
ಮೈಸೂರು ನಗರದಲ್ಲಿ 275 ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ರಿಂಗ್ ರೋಡ್ನಲ್ಲಿ 8 ಹೈವೇ ಪೆಟ್ರೋಲ್ ವಾಹನ ನಿಯೋಜನೆ ಮಾಡಲಾಗುತ್ತದೆ. ಮೈಸೂರು ನಗರದ ಹೊರವಲಯದಲ್ಲಿ 12 ಕಡೆ ಚೆಕ್ಪೋಸ್ಟ್ ನಿರ್ಮಿಸಲಾಗುತ್ತದೆ. 18 ಕಡೆ ಚೆಕ್ಪೋಸ್ಟ್ ನಿರ್ಮಿಸಿ ಕಿಡಿಗೇಡಿಗಳ ಮೇಲೆ ತೀವ್ರಾ ನಿಗಾ ವಹಿಸಲಾಗುತ್ತೆ. ಹೊಸ ವರ್ಷಾಚರಣೆ ಕಾರ್ಯಕ್ರಮ ಆಯೋಜನೆಗೆ ಅನುಮತಿ ಕಡ್ಡಾಯವಾಗಿದೆ ಎಂದರು.
ಅಸಭ್ಯ ವರ್ತನೆ ತಡೆಯಲು 36 ವಿಶೇಷ ಕಾರ್ಯಪಡೆ ತಂಡ ರಚನೆ ಮಾಡಲಾಗಿದೆ. ಅದೇ ರೀತಿ ಮಹಿಳೆಯರ ಸುರಕ್ಷೆಗಾಗಿ 8 ಸುರಕ್ಷತಾ ಪಿಂಕ್ ಗರುಡಾ ರಚಿಸಲಾಗಿದೆ. ಪ್ರಮುಖ ಸ್ಥಳದಲ್ಲಿ ಶ್ವಾನದಳ, ವಿದ್ವಂಸಕ ಕೃತ್ಯ ತಡೆಗಾಗಿ 4 ತಂಡ ರಚನೆ ಮಾಡಲಾಗಿದೆ. ಧ್ವನಿವರ್ಧಕ ಅಳವಡಿಸುವುದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಬೇಕು. ಕಾರ್ಯಕ್ರಮದ ನೆಪದಲ್ಲಿ ಮಾದಕ ವಸ್ತುಗಳ ಸೇವನೆ, ಜೂಜಾಟ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.