ಬಿಎಂಟಿಸಿಯಂತೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ 1 ಹಾಗೂ 3 ದಿನದ ಪಾಸ್ ವಿತರಣೆಗೆ ಬಿಎಂಆರ್ಸಿಎಲ್ ಮುಂದಾಗಿದೆ.
ಒಂದು ದಿನದ ಪಾಸ್ಗೆ ರೂ. 200ನ್ನು ಬಿಎಂಆರ್ಸಿಎಲ್ ನಿಗದಿಪಡಿಸಿದ್ದು, ಖರೀದಿ ದಿನದಂದು ಅನಿಯಮಿತವಾಗಿ ಪ್ರಯಾಣಿಸಬಹುದು. ಮೂರು ದಿನದ ಪಾಸ್ಗೆ 400 ರೂಪಾಯಿ ನಿಗದಿಗೊಳಿಸಲಾಗಿದೆ.
ಖರೀದಿ ದಿನದಿಂದ 3 ದಿನ ಅನ್ಲಿಮಿಟೆಡ್ ಪ್ರಯಾಣ ಮಾಡಬಹುದು. ಪಾಸ್ ಮೊತ್ತದಲ್ಲಿ 50 ರೂ. ಹಿಂಪಡೆಯಲು ಅವಕಾಶವಿದೆ. ಈ ಕುರಿತು ಬಿಎಂಆರ್ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಒಂದು ದಿನ ಹಾಗೂ 3 ದಿನಗಳ ಪಾಸ್ಗಳು ನಮ್ಮ ಮೆಟ್ರೋ ನಿಲ್ದಾಣದ ಟಿಕೆಟ್ ಕೌಂಟರ್ಗಳಲ್ಲಿ ಲಭ್ಯವಿದೆ. ಪ್ರಯಾಣಿಕರು 1 ಹಾಗೂ 3 ದಿನದ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ ಯಾವುದೇ ಗ್ರಾಹಕ ಸಂಪರ್ಕ ಕೇಂದ್ರಗಳಲ್ಲಿ ಸ್ಮಾರ್ಟ್ ಕಾರ್ಡ್ಗಳನ್ನು ಉತ್ತಮ ಸ್ಥಿತಿಯಲ್ಲಿ ಹಿಂದಿರುಗಿಸಿದರೆ ಪ್ರಯಾಣಿಕರು 50 ಠೇವಣಿಯನ್ನು ಹಿಂಪಡೆಯಬಹುದಾಗಿದೆ.
ವೆಬ್ ಸೈಟ್ ಅಥವಾ ನಮ್ಮ ಮೆಟ್ರೋ ಆ್ಯಪ್ ಮೂಲಕ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಿಕೊಂಡ ಒಂದು ಗಂಟೆಯ ಬಳಿಕದಿಂದ 7 ದಿನದೊಳಗೆ ಒಮ್ಮೆಯಾದರೂ ಆ ಕಾರ್ಡ್’ನ್ನು ಆಟೋ ಮ್ಯಾಟಿಕ್ ಫೇರ್ ಕಲೆಕ್ಷನ್ ಗೇಟ್ ಗಳಲ್ಲಿ ಟ್ಯಾಪ್ ಮಾಡಬೇಕು. ಕಾರ್ಡ್ ಟಾಪ್ ಅಪ್ ಟರ್ಮಿನಲ್ ಗಳಲ್ಲಿ ರೀಚಾರ್ಜ್ ಮಾಡಿದ ಸ್ಮಾರ್ಟ್ ಕಾರ್ಡ್ ನ್ನು 15 ದಿನಗಳಲ್ಲಿ ನವೀಕರಿಸಬೇಕು.
ಒಂದು ವೇಳೆ ಪ್ರಯಾಣಿಕರು ಈ ಅವಧಿಯಲ್ಲಿ ಸ್ಮಾರ್ಟ್ ಕಾರ್ಡ್ ನಲ್ಲಿನ ಬ್ಯಾಲೆನ್ಸ್ ಹಣವನ್ನು ನವೀಕರಿಸದಿದ್ದರೆ, ರೀಚಾರ್ಚ್ ಮಾಡಿದ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ. ಯಾವ ರೀತಿ ರೀಜಾರ್ಜ್ ಮಾಡಿರುತ್ತಾರೋ ಅದೇ ರೀತಿಯಲ್ಲಿ 30 ದಿನದೊಳಗೆ ಹಣ ವಾಪಾಸ್ ಮಾಡಲಾಗುತ್ತದೆ. ಈ ವೇಳೆ ಶೇ.2.5 ಹಣವನ್ನು ರದ್ಧತಿ ಶುಲ್ಕವಾಗಿ ಕಡಿತಗೊಳಿಸಲಾಗುತ್ತದೆ ಎಂದು ತಿಳಿಸಿದೆ.